

ಮೈಸೂರು: ರಾಜ್ಯದಲ್ಲಿ ಧರ್ಮದ ಆಧಾರದ ಮೇಲೆ ತೆರಿಗೆ ಸಂಗ್ರಹದ ವರದಿ ಸಿದ್ಧಪಡಿಸಿ. ಹಿಂದುಗಳು, ಮುಸ್ಲಿಮರ, ಕ್ರೈಸ್ತರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗ ಪಡಿಸಿ. ರಾಜ್ಯ ಬಜೆಟ್‌ಗೆ ಸಾಬ್ರ ಕೊಡುಗೆ ಎಷ್ಟು ಎಂಬುದು ಜನರಿಗೆ ಗೊತ್ತಾಗಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಸೀದಿಯಿಂದ, ಚರ್ಚ್‌ನಿಂದ ಸರ್ಕಾರಕ್ಕೆ ಐದು ರೂಪಾಯಿ ತೆರಿಗೆ ಬರುತ್ತಿದೆಯಾ? ಇದು ಹಲಾಲ್ ಬಜೆಟ್ ಅನ್ನುವುದರಲ್ಲಿ ತಪ್ಪೇನಿಲ್ಲ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣ, ಮಡಿವಾಳರು ಹೀಗೆ ನಾನಾ ಜಾತಿಯ ಅಭಿವೃದ್ಧಿ ನಿಗಮಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ? ಆದಾಯವಿಲ್ಲದ ಮಸೀದಿ, ಇಮಾಮ್‌ಗಳಿಗೆ ಹೆಚ್ಚಿನ ಹಣ ಕೊಡುತ್ತೀರಾ. ಆದರೆ, ನಮ್ಮ ಅರ್ಚಕರಿಗೆ ಏಕೆ ಹಣ ಕೊಡೋದಿಲ್ಲ. ಇದು ತಾಲಿಬಾನ್ ಸರ್ಕಾರ ಅನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಕೆಲವು ಮುಸ್ಲಿಮರಿಗೆ ಪಾಕಿಸ್ತಾನ ಪರವಾದ ನಿಷ್ಠೆ ಇದೆ. ರಾಜ್ಯದಲ್ಲಿ ಮೊದಲು ಮದರಸಾ, ಉರ್ದು ಶಾಲೆಗಳನ್ನು ಬಂದ್ ಮಾಡಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೂಂಡಾ ಸರ್ಕಾರ ನಡೆಸುತ್ತಿದ್ದಾರೆ. ಕರ್ನಾಟಕ ಏನು ಶಿವಕುಮಾರ್ ಅವರ ರಿಯಲ್ ಎಸ್ಟೇಟ್ ಆಫೀಸಾ? ಮೇಕೆದಾಟು ಪಾದಯಾತ್ರೆ ಅದು ಕಾಂಗ್ರೆಸ್‌ನ ಜಾತ್ರೆ. ಆ ಜಾತ್ರೆಯಲ್ಲಿ ನಟರಾದ ಸುದೀಪ್, ಶಿವಣ್ಣ, ಯಶ್ ಮುಂತಾದವರು ಏತಕ್ಕೆ ಭಾಗವಹಿಸಬೇಕು? ಕಾಂಗ್ರೆಸ್ ಭಾವುಟ ಇಲ್ಲದೆ ಯಾತ್ರೆ ಮಾಡಿ ನಾವೆಲ್ಲರು ಬರುತ್ತೇವೆ. ‘ನಟ್ಟು ಬೋಲ್ಟ್ ಟೈಟ್’ ಡಿ.ಕೆ. ಶಿವಕುಮಾರ್ ಅವರ ‘ಬ್ರದರ್ಸ್’ ಮಾತನಾಡುವ ಭಾಷೆ. ಅದೇ ಭಾಷೆಯನ್ನು ಶಿವಕುಮಾರ್ ಇದೀಗ ಪ್ರಯೋಗ ಮಾಡಿದ್ದಾರೆ. ಶಿವಕುಮಾರ್ ಹುಲಿ ಏರಿದ್ದಾರೆ. ಜನ ಮರ್ಯಾದೆ ಕೊಡುತ್ತಿರುವುದು ಹುಲಿಗೆ ಹೊರತು ನಿಮಗಲ್ಲ, ದರ್ಪ ಬಿಡಿ. ಕನ್ನಡ ಸಿನಿಮಾ ನಟರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದರು.
ಸಚಿವ ಭೋಸರಾಜು ಹಾಗೂ ಶರಣಪ್ರಕಾಶ್ ಪಾಟೀಲ್ ಸಿಎಂ ಸಮುಖದಲ್ಲಿಯೇ ವಾಗ್ವಾದ ನಡೆಸಿದ್ದಾರೆ. ಸರ್ಕಾರದಲ್ಲಿ ಬೀದಿ ನಾಟಕ ನಡೆಯುತ್ತಿದ್ದು, ಎಷ್ಟು ದಿನ ನಡೆಯುತ್ತದೆಯೋ ನಡೆಯಲಿ. ಐದು ವರ್ಷ ಅವರಿಗೆ ಅಧಿಕಾರ ಕೊಟ್ಟು ಆಗಿದೆ, ಏನೇನು ಮಾಡುತ್ತಾರೋ ಮಾಡಲಿ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದರು.