

ವಿಜಯವಾಣಿ ಸುದ್ದಿಜಾಲ ಹಾಸನ
ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ನೀರು ಹರಿಯಬಿಡಲಾಯಿತು. ಶುಕ್ರವಾರ ಸಂಜೆ 7 ಗಂಟೆಗೆ 6 ಕ್ರಸ್ಟ್ ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
ಮಲೆನಾಡು ಭಾಗದಲ್ಲಿ ಮಳೆ ಹೆಚ್ಚುವ ಸಾಧ್ಯತೆಯಿದ್ದು ಪ್ರಸ್ತುತ 47320 ಕ್ಯೂಸೆಕ್ ಒಳಹರಿವಿದೆ. ಮುಂದಿನ ದಿನಗಳಲ್ಲಿ ಒಳಹರಿವು ಹೆಚ್ಚಾದರೆ ಹೊರ ಹರಿವು ಹೆಚ್ಚಲಿದೆ. ಇಲ್ಲದಿದ್ದರೆ ಯಥಾಸ್ಥಿತಿ ಕಾಪಾಡಿಕೊಳ್ಳಲಾಗುವುದು ಎಂದು ಹೇಮಾವತಿ ಜಲಾಶಯ ಅಧಿಕಾರಿಗಳು ತಿಳಿಸಿದ್ದಾರೆ.
ಹೇಮಾವತಿ ನದಿ ವ್ಯಾಪ್ತಿಯಲ್ಲಿ ನೀರಿನ ಹರಿವು ಹೆಚ್ಚುವ ಸಾಧ್ಯತೆಯಿರುವ ಕಾರಣ ಸಾರ್ವಜನಿಕರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ಗೊರೂರು ಮುಖ್ಯ ರಸ್ತೆಯಿಂದ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧಿಸಿದೆ. ಅಗತ್ಯ ಪೊಲೀಸ್ ಭದ್ರತೆಯನ್ನೂ ಜಲಾಶಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ.