ಮೀಸಲಾತಿಗಾಗಿ ಮರು ಹೋರಾಟಕ್ಕೆ ಚಾಲನೆ: ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಜಯ-ಮೃತ್ಯುಂಜಯ-ಸ್ವಾಮೀಜಿ
Published on

ದಲಿತ ಬಾಂಧವರ ಜತೆಗೆ ಲಿಂಗಾಯತರು ಮೀಸಲಿಗೆ ಅರ್ಹರು. ಮಲೆಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಮೂಲಕ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಹೋರಾಟಕ್ಕೆ ಮರು ಚಾಲನೆ ನೀಡಲಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಲಿಂಗಾಯತಗೌಡ ಮಹಾಸಭಾ ವತಿಯಿಂದ ನಗರದ ಹೊಸಮಠದ ಶ್ರೀ ನಟರಾಜ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಗದ್ಗುರು ವಂದನಾ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಲಿಂಗಾಯತ ಸಮಾಜ ಬರಬೇಕು. ಲೋಕಸಭೆ ಚುನಾವಣೆ ಒಳಗೆ ರಣಕಹಳೆ ಮೊಳಗಿಸುತ್ತೇವೆ. ಮತ್ತೆ ಇಂತಹ ಅವಕಾಶ ಸಿಗುವುದಿಲ್ಲ ಎಂದರು.

ಮೀಸಲಾತಿ ಸಂವಿಧಾನ ನೀಡಿರುವ ಹಕ್ಕು. ಸ್ವಾಭಿಮಾನಿಗಳಾದ ನಾವು ಯಾರನ್ನೂ ಕೈಚಾಚಿಲ್ಲ. ಲಿಂಗಾಯತರು ದಾಸೋಹ, ಶಿಕ್ಷಣ ನೀಡಲು ಮಾತ್ರ ಸೀಮಿತರಲ್ಲ. ಜಾತಿ ಗಣತಿಯು ಕಾಯಕದ ಆಧಾರದ ಮೇಲೆ ಆಗಿದೆ. ಲಿಂಗಾಯತರು ಎಂದಿಗೂ ಸೌಲಭ್ಯಕ್ಕಾಗಿ ಜಾತಿ ಬಿಟ್ಟು ಹೋಗಿಲ್ಲ. ನಾವು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಹರಿದು ಹಂಚಿ ಹೋಗಿರುವ ನಾವು ಒಂದಾಗಬೇಕು. ಹೋರಾಟ ಮಾಡುವ ಮೂಲಕ ಮೀಸಲಾತಿ ಪಡೆಯಬೇಕಾಗಿದೆ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದವರನ್ನು ಸೇರಿಸಲಾಗಿದೆ. ಆದರೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಿಲ್ಲ. ಇದರಿಂದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸೇರಿದಂತೆ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಸಮುದಾಯದ ಉಪಪಂಗಡಗಳಿಗೆ ತೀವ್ರ ಅನ್ಯಾಯವಾಗುತ್ತಿದೆ. ಒಬಿಸಿ ಪಟ್ಟಿಗೆ ಸೇರಿದರೆ ಐಪಿಎಸ್, ಐಎಎಸ್, ನೀಟ್, ಐಎಫ್‌ಎಸ್, ನವೋದಯ ಪರೀಕ್ಷೆಗಳಲ್ಲಿ ನಮ್ಮ ಮಕ್ಕಳಿಗೆ ನ್ಯಾಯ ಸಿಗಲಿದೆ ಎಂದರು.

ರಾಜ್ಯದಲ್ಲಿ ಲಿಂಗಾಯತ ಗೌಡ ಪಂಚಮಸಾಲಿ ಸಮುದಾಯವನ್ನು 2 ‘ಎ’ಗೆ ಸೇರಿಸಬೇಕು ಎಂಬ ಹೋರಾಟ ಒಂದು ಹಂತಕ್ಕೆ ಬಂದಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಲಾಗಿದೆ. ಸಮುದಾಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಸಾಮಾಜಿಕ ನ್ಯಾಯದ ಅಡಿ ನಮಗೆ 2 ‘ಎ’ ಮೀಸಲಾತಿ ನೀಡಬೇಕೆಂದು ಕೋರಿದ್ದೇವೆ. ಈ ಸಂಬಂಧ ಅಧಿವೇಶನ ಮುಗಿದ ಮೇಲೆ ತಜ್ಞರ ಸಮಿತಿ ರಚನೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಯಾವುದೇ ಸರ್ಕಾರ ಬಂದರೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net