

ದೇವದುರ್ಗ: ಪಟ್ಟಣದ ಎಪಿಎಂಸಿ ವ್ಯಾಪಾರಿ ಮಳಿಗೆಗಳ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಎನ್‌ಆರ್‌ಬಿಸಿ ಕಳಪೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಪಟ್ಟಣದ ಜಹಿರುದ್ದೀನ್ ಪಾಷಾ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಎಪಿಎಂಸಿಯಲ್ಲಿ ಸುಮಾರು 57 ಮಳಿಗೆಗಳನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ. ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸಂಬಂಧಿಕರು ಹಾಗೂ ತಮಗೆ ಬೇಕಾದವರಿಗೆ ಕಡಿಮೆ ಬೆಲೆಗೆ ಮಳಿಗೆ ಮಾರಾಟ ಮಾಡಿದ್ದಾರೆ. ಒಂದು ಮಳಿಗೆ ಮಾರುಕಟ್ಟೆ ಮೌಲ್ಯ 67 ಲಕ್ಷ ರೂ.ಯಿದ್ದು, 6 ಲಕ್ಷ ರೂ.ಗೆ ಹಂಚಿಕೆ ಮಾಡಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಎಪಿಎಂಸಿ ಮಳಿಗೆಗಳ ಹಂಚಿಕೆಯನ್ನು ರದ್ದುಪಡಿಸಬೇಕು. ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣ ಹಾಗೂ ಉಪಕಾಲುವೆ ನವೀಕರಣ ಕಾಮಗಾರಿಯ ಸಮಗ್ರ ತನಿಖೆ ನಡೆಸಬೇಕು. ಗುಣಮಟ್ಟದ ಕಾಮಗಾರಿ ಕೈಗೊಳ್ಳದ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಬೇಕು. ದೇವದುರ್ಗ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ ರಾಶಿಗೆ ಕಣಗಳನ್ನು ನಿರ್ಮಿಸಬೇಕು. ಕಳಪೆ ಬಿತ್ತನೆ ಬೀಜ ಮಾರಾಟ ತಡೆಯಬೇಕು. ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ, ಗೊಬ್ಬರ ಮಾರುವ ಅಂಗಡಿಗಳ ಪರನವಾಗಿ ರದ್ದುಮಾಡಬೇಕು ಎಂದು ಆಗ್ರಹಿಸಿದರು.