

ಬೆಂಗಳೂರು: ಮಾಜಿ ಕಾರ್ಪೋರೇಟರ್ ಒಬ್ಬರಿಗೆ ಚಾಕು ಇರಿಯಲಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಲಿಕೆ ಸದಸ್ಯರ ಸಂಬಂಧಿಯಿಂದಲೇ ಈ ದುಷ್ಕೃತ್ಯ ನಡೆದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಸ್ಕೆಆರ್ ಮಾರ್ಕೆಟ್ ವಾರ್ಡ್ ಮಾಜಿ ಸದಸ್ಯ ಅಯೂಬ್ ಖಾನ್ ಚೂರಿ ಇರಿತಕ್ಕೆ ಒಳಗಾದವರು. ಇವರ ದೇಹದಲ್ಲಿ ಕೆಲವು ಭಾಗಗಳಿಗೆ ಗಾಯಗಳಾಗಿದ್ದು, ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಲಾಗಿದೆ.
ಇಂದು 7.30ರ ಸುಮಾರಿಗೆ ಚಾಮರಾಜಪೇಟೆಯ ವಿನಾಯಕ ಚಿತ್ರಮಂದಿರ ಬಳಿ ಈ ಘಟನೆ ನಡೆದಿದ್ದು, ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆಸ್ತಿ ವಿವಾದದಿಂದಾಗಿ ಈ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ ಆರೋಪಿ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.