ಪೊಲೀಸರು-ಜನರ ನಡುವೆ ಬಾಂಧವ್ಯ ಅವಶ್ಯ: ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್

8
Published on

ಮೈಸೂರು: ನಾಗರಿಕರು ಹಾಗೂ ಪೊಲೀಸರ ನಡುವೆ ಸ್ನೇಹ-ಬಾಂಧವ್ಯ ಗಟ್ಟಿಯಾದರೆ ದುಷ್ಕೃತ್ಯ ತಡೆಯಲು ಸಾಧ್ಯ ಎಂದು ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ, ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಹೇಳಿದರು.

ಕರ್ನಾಟಕ ರಾಜ್ಯ ಪೊಲೀಸ್, ಮೈಸೂರು ನಗರ ಪೊಲೀಸ್ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೊಲೀಸರು ಹೆಚ್ಚಾಗಿ ಕಳ್ಳರು, ಸಮಾಜಘಾತಕರನ್ನು ಹಿಡಿಯಲು ಮುಂದಾಗಿರುತ್ತಾರೆ. ಹಾಗಾಗಿ ಸಾಮಾನ್ಯ ಜನರೊಂದಿಗೂ ಅದೇ ದೃಷ್ಟಿಕೋನ, ಅನುಮಾನ ವ್ಯಕ್ತವಾಗುವುದು ಸಹಜ. ಇದರಿಂದ ಪೊಲೀಸರು -ಸಾಮಾನ್ಯ ಜನರ ನಡುವೆ ಅಂತರ ಕಡಿಮೆ ಅಗಿ ಜನರಲ್ಲಿ ಭಯಪಡುವ ವಾತಾವರಣವಿದೆ ಎಂದು ಹೇಳಿದರು.

ಇದನ್ನು ಹೋಗಲಾಡಿಸಲು ಪೊಲೀಸರು ಹಾಗೂ ಸಾಮಾನ್ಯ ಜನರ ನಡುವೆ ಸ್ನೇಹ-ಬಾಂಧವ್ಯದ ವಾತಾವರಣ ನಿರ್ಮಾಣವಾಗಲಿ. ಹಾಗಾದಾಗ ಸಮಾಜದಲ್ಲಿ ಅಪರಾಧ ಪ್ರಕರಣಗಳು ನಡೆದಾಗ ಸುಲಭವಾಗಿ ಪೊಲೀಸರಿಗೆ ಮಾಹಿತಿ ದೊರೆತು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ನೆರವಾಗುತ್ತದೆ ಎಂದರು.

ಈ ಸ್ನೇಹ ಬಾಂಧವ್ಯದಿಂದ ಪೊಲೀಸರ ಕಾರ್ಯದ ಬಗ್ಗೆಯೂ ಜನರಿಗೆ ತಿಳಿವಳಿಕೆ ಮೂಡುತ್ತದೆ. ಅಲ್ಲದೇ ಸಮಾಜದಲ್ಲಿ ಬೇರೂರಿರುವ ಕೆಲ ನಕಾರಾತ್ಮಕ ಧೋರಣೆಗಳು ನಿವಾರಣೆ ಅಗುತ್ತದೆ ಎಂದು ಹೇಳಿದರು.

ಇದರ ಭಾಗವಾಗಿ ರಾಜ್ಯ ಸರ್ಕಾರ ರೂಪಿಸಿರುವ ಮನೆ-ಮನೆಗೆ ಪೊಲೀಸ್ ಯೋಜನೆ ಉತ್ತಮ ಕಾರ್ಯವಾಗಿದೆ. ಇದರ ಮೂಲಕ ಪೊಲೀಸರು ಜನರ ಮನೆಗಳಿಗೆ ಹೋಗಿ ಕಾನೂನು-ಸುವ್ಯವಸ್ಥೆ, ಅಪರಾಧ ಕೃತ್ಯ ತಡೆಗಟ್ಟಲು ಬೇಕಾದ ಮುಂಜಾಗ್ರತಾ ಕ್ರಮ ಕುರಿತು ಅರಿವು ಮೂಡಿಸುವುದು ಉತ್ತಮ ಕಾರ್ಯ ಎಂದರು.

ನಾನು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಪೊಲೀಸರೊಂದಿಗೆ ಸಂಪರ್ಕ ಬೆಳೆಯಿತು. ಹತ್ತಿರದಿಂದ ಅವರ ಕಾರ್ಯವೈಖರಿ ನೋಡಿದಾಗ ತುಂಬಾ ಕಷ್ಟಕರ ಜವಾಬ್ದಾರಿ ಎನ್ನ್ನುವುದು ಅರಿವಿಗೆ ಬಂತು ಎಂದರು.

ಪೊಲೀಸರು ಯಾವುದಾದರೂ ಮನೆಗೆ ಬಂದರೆ ಏನೋ ಆಗಿದೆ ಎನ್ನುವಂತೆ ಅಕ್ಕಪಕ್ಕದವರು ಏನೋ ಒಂದು ರೀತಿಯಲ್ಲಿ ನೋಡುವುದು ಈಗಲೂ ಇದೆ. ಮನೆಗಳಿಗೆ ನಿತ್ಯ ಪೊಲೀಸರು ಹೋಗಿ ಜನರಲ್ಲಿ ಜಾಗೃತಿ ಮೂಡಿಸಿದರೆ ಇಂತಹವುಗಳೆಲ್ಲ ಕಡಿಮೆಯಾಗುತ್ತವೆ. ಇದು ಇಲಾಖೆ ಬಗ್ಗೆ ಧನಾತ್ಮಕ ಚಿಂತನೆ ಮೂಡಲು ಸಹಕಾರಿಯಾಗುತ್ತದೆ ಎಂದರು.

ಕಷ್ಟ-ಸುಖ, ಸಮಸ್ಯೆಗಳನ್ನು ಅರಿತುಕೊಳ್ಳಲು ಮನೆ ಬಾಗಿಲಿಗೆ ಬರುವ ಪೊಲೀಸರನ್ನು ನಾಗರಿಕರು ಸ್ವಾಗತಿಸಬೇಕು. ಪೊಲೀಸ್ ಸಿಬ್ಬಂದಿಗೆ ಸೂಕ್ತ ಮಾಹಿತಿ ನೀಡಬೇಕು. ಅವರ ಕರ್ತವ್ಯಕ್ಕೆ ಸಹಕಾರ ನೀಡಬೇಕು. ಆದ್ದರಿಂದ ನಾಗರಿಕರೂ ತಮ್ಮ ಕರ್ತವ್ಯಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.

ಮನೆ-ಮನೆಗೆ ಪೊಲೀಸ್ ವ್ಯವಸ್ಥೆಯಲ್ಲಿ ಒಬ್ಬ ಕಾನ್‌ಸ್ಟೆಬಲ್‌ಗೆ 250 ಕುಟುಂಬಗಳ ಜವಾಬ್ದಾರಿ ವಹಿಸಲಾಗಿರುತ್ತದೆ. ಅಷ್ಟೂ ಕುಟುಂಬದಲ್ಲಿ ಇರುವ ಮುಖ್ಯವಾದವರ ಹೆಸರನ್ನು ಪೊಲೀಸ್ ಸಿಬ್ಬಂದಿಗೆ ಗುರುತು ಇಟ್ಟುಕೊಳ್ಳುವುದು ಕಷ್ಟವಾಗಬಹುದು. ಆದರೆ ಆ ಕುಟುಂಬಗಳಿಗೆಲ್ಲಾ ತಮ್ಮನ್ನು ರಕ್ಷಣೆ ಮಾಡುತ್ತಿರುವ ಕಾನ್‌ಸ್ಟೆಬಲ್ ಹೆಸರು ತಿಳಿದರೆ ಈ ಕಾರ್ಯ ಸಾರ್ಥಕವಾಗುತ್ತದೆ ಎಂದರು.

ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾತನಾಡಿ, ಪೊಲೀಸರು ನಾಗರಿಕರ ಹಕ್ಕುಗಳ ರಕ್ಷಕರು ಎನ್ನುವುದನ್ನು ಜನರು ಅರಿಯಬೇಕು. ಜನರಲ್ಲಿ ಇರುವ ಭಯ ಹೋಗಲಾಡಿಸಿ, ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಲು ಮನೆ, ಮನೆ ಬೀಟ್ ಕಾರ್ಯಕ್ರಮ ವೇದಿಕೆಯಾಗಿದೆ ಎಂದರು.

ಈ ಯೋಜನೆಯಲ್ಲಿ ಪ್ರತಿ ಬೀಟ್ ಕಾನ್‌ಸ್ಟೆಬಲ್‌ಗೆ ಕ್ಲಸ್ಟರ್‌ಗಳನ್ನು ಮಾಡಿ 250 ಮನೆಗಳ ಜವಾಬ್ದಾರಿ ನೀಡಲಾಗುವುದು. ಆ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಯ ಮಾಹಿತಿ ಪಡೆದುಕೊಂಡಿರುತ್ತಾರೆ. ತಮ್ಮ ವ್ಯಾಪ್ತಿಯಲ್ಲಿ ಕಾನೂನು-ಸುವ್ಯವಸ್ಥೆ ಕುರಿತು, ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ ಎಂದು ಹೇಳಿದರು.

ಮನೆ, ಬಡಾವಣೆಗಳ ಸಮಸ್ಯೆಯನ್ನು ಕ್ಯೂಆರ್ ಕೋಡ್ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಅಧಿಕಾರಿಗಳು ಆ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ಕಾರ್ಯಪ್ರವೃತ್ತರಾಗುತ್ತಾರೆ ಎಂದು ಹೇಳಿದರು.

ಜನರು ತಮ್ಮ ಮನೆಗೆ ಬರುವ ಸಿಬ್ಬಂದಿಗೆ ತಮ್ಮ ಬಡಾವಣೆ, ರಸ್ತೆ, ಸುತ್ತಮುತ್ತ ನಡೆಯುವ ಕೃತ್ಯಗಳ ಕುರಿತು ಮಾಹಿತಿ ನೀಡಬಹುದಾಗಿದೆ. ಅದಕ್ಕಾಗಿ ಬೀಟ್ ಪೊಲೀಸರ ಮೊಬೈಲ್ ಸಂಖ್ಯೆ, ಹಿರಿಯ ಅಧಿಕಾರಿಗಳ ಸಂಖ್ಯೆಯನ್ನು ಜನರಿಗೆ ನೀಡಲಾಗುವುದು. ಯಾವುದೇ ಸಮಯದಲ್ಲಿ ಬೇಕಾದರೂ ಮಾಹಿತಿ ನೀಡಲು ಇದರಿಂದ ಸಹಕಾರಿ ಅಗುತ್ತದೆ ಎಂದರು.

ಸಲಹೆಗಾರ ಪ್ರಶಸ್ತಿ ನೀಡಲಾಗುವುದು

250 ಮನೆಗಳಿಗೆ ಒಬ್ಬರು ಸಲಹೆಗಾರರನ್ನು ಆಯ್ಕೆ ಮಾಡಿ ಅವರೊಂದಿಗೆ ಪ್ರತಿ ಶನಿವಾರ ಸಭೆ ನಡೆಸಲಾಗುತ್ತದೆ. ಈ ಸಲಹೆಗಾರರಲ್ಲಿ ಒಬ್ಬರನ್ನು ಅತ್ಯುತ್ತಮ ಪೊಲೀಸ್ ಸ್ನೇಹಿತ, ಸಲಹೆಗಾರ ಪ್ರಶಸ್ತಿಗೆ ಆಯ್ಕೆ ಮಾಡುತ್ತವೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.

ಮನೆ-ಮನೆಗೆ ಪೊಲೀಸ್ ಯೋಜನೆ ಕುರಿತ ಸ್ಟಿಕ್ಕರ್, ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಉಪ ಪೊಲೀಸ್ ಆಯುಕ್ತರಾದ ಸುಂದರ್‌ರಾಜ್, ಆರ್.ಎನ್. ಬಿಂದುಮಣಿ, ಸಹಾಯಕ ಪೊಲೀಸ್ ಆಯುಕ್ತರಾದ ಮೋಹನ್‌ಕುಮಾರ್, ಅಶ್ವತ್ಥ್‌ನಾರಾಯಣ್, ರಾಜೇಂದ್ರ, ರವಿಪ್ರಸಾದ್, ಶಿವಶಂಕರ್, ಸ್ನೇಹಾ ರಾಜ್, ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net