ಬುದ್ಧರ ಶಾಂತಿ ಸಂದೇಶ ಜಗತ್ತಿಗೆ ಅಗತ್ಯ

13 HBD 1
ಮನ್ನಾಎಖ್ಖೇಳ್ಳಿ ಹತ್ತಿರದ ರೇಕುಳಗಿ ಮೌಂಟ್‌ನ ಬುದ್ಧ ವಿಹಾರಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ದರ್ಶನ ಪಡೆದರು. ಸಚಿವ ರಹೀಮ್‌ಖಾನ್, ಭಿಕ್ಕು ರೇವತ್, ಕೆ.ಪುಂಡಲಿಕರಾವ, ಅನಿಲ ಬೆಲ್ದಾರ್, ಮಲ್ಲಿಕಾರ್ಜುನ ಯಾತನೂರ ಇತರರಿದ್ದರು.
Published on

ಚಿಟಗುಪ್ಪ: ಆಧುನಿಕತೆಯ ಅಶಾಂತಿ ವಾತಾವರಣದಲ್ಲಿ ಇಡೀ ಜಗತ್ತಿಗೆ ಭಗವಾನ ಬುದ್ಧರ ಶಾಂತಿಯ ಸಂದೇಶ ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಮನ್ನಾಎಖ್ಖೇಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರೇಕುಳಗಿ ಮೌಂಟ್‌ನಲ್ಲಿರುವ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಶನಿಬಾರ ೬೮ನೇ ಧಮ್ಮ ಚಕ್ರ ಪರಿವರ್ತನಾ ದಿನಾಚರಣೆ ಹಾಗೂ ಅಶೋಕ ವಿಜಯ ದಶಮಿ ನಿಮಿತ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ ಹಾಗೂ ನೆಮ್ಮದಿಯ ಜೀವನ ಸಾಗಿಸಬೇಕೆಂದು ಹೇಳಿದರು.

ಬುದ್ಧ ವಿಹಾರವೂ ಸುಂದರ ಪರಿಸರದಲ್ಲಿದೆ. ಈ ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕತೆಯಿಂದ ಶ್ರಮಿಸುವುದಾಗಿ ಭರವಸೆ ನೀಡಿದರು.
ಭಿಕ್ಕು ಖೇಮಚಾರ ತ್ರಿಪುರಾ ಆಶೀರ್ವಚನ ನೀಡಿ, ಜಗತ್ತಿನಲ್ಲಿ ಭಗವಾನ್ ಬುದ್ಧರ ತತ್ವ ಸಿದ್ಧಾಂತ ಅತ್ಯಮೂಲ್ಯವಾಗಿವೆ. ಅವರ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಹೆಚ್ಚಿನ ಪ್ರಚಾರ ನಡೆಯಬೇಕೆಂದು ಹೇಳಿದರು.

ಸಚಿವ ರಹೀಮï‌ಖಾನ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿದರು. ವಿಹಾರದ ಭಂತೆ ರೇವತ್ ಅಧ್ಯಕ್ಷತೆ ವಹಿಸಿದ್ದರು. ಭಿಕ್ಕುಗಳಾದ ಆಯುಪಾಲ ಬರ್ಮಾ, ಧಮ್ಮಧರ ಜಾಲ್ನಾ, ಸಂಘಾತಿಲೋಕ, ರೇವತ್, ಧರ್ಮಪಾಲ, ಭಿಕ್ಕುಣಿಗಳಾದ ಚಾರುಶೀಲ ನಾಂದೇಡ, ಮಹಾಪ್ರಜಾಪತಿ, ಪ್ರಮುಖರಾದ ಪ್ರೇಮಸಾಗರ ದಾಂಡೆಕರ, ಕೆ.ಪುಂಡಲೀಕರಾವ, ಅನಿಲ ಬೆಲ್ದಾರ್, ಸಂಜುಕುಮಾರ ದೊಡ್ಡಮನಿ, ಪ್ರೇಮಿಲಾ ಡಾಂಗೆ, ವೈಶಾಲಿ ಮೋರೆ, ಶಿವಮೂರ್ತಿ, ಪ್ರಕಾಶ ಗುತ್ತೇದಾರ್, ಸಂಬಣ್ಣ ದಂಡಿನ, ಲುಂಬಿನಿ ಪರಂಜೆಪೆ ಇತರರಿದ್ದರು. ಭಿಕ್ಕು ಧರ್ಮಪಾಲ ಸ್ವಾಗತಿಸಿದರು.
ಬುದ್ಧ ವಿಹಾರದಲ್ಲಿ ಬೆಳಗ್ಗೆ ೭ಕ್ಕೆ ಭಿಕ್ಕು ಸಂಘದಿಂದ ಸಾಮೂಹಿಕವಾಗಿ ಬುದ್ಧ ವಂದನೆ, ಧಮ್ಮ ಧ್ವಜಾರೋಹಣ, ಬುದ್ಧ ಪ್ರವಚನ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಬೀದರ್ ದಕ್ಷಿಣ ಕ್ಷೇತ್ರದ ರೇಕುಳಗಿ ಮೌಂಟ್ ಬುದ್ಧ ವಿಹಾರ ಯಾತ್ರಾ ಸ್ಥಳವಾಗಿ ರೂಪುಗೊಳ್ಳುತ್ತಿದ್ದು, ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಅನುದಾನ ಒದಗಿಸುವಂತೆ ಒತ್ತಡ ಹೇರುವೆ. ಯಾತ್ರಿ ನಿವಾಸ ನಿರ್ಮಾಣಕ್ಕೆ ೨೫ ಲಕ್ಷ ಅನುದಾನ ಒದಗಿಸುವೆ. ಬುದ್ಧನ ವಿಚಾರಗಳು ನಮ್ಮ ಜೀವನಕ್ಕೆ ದಾರಿದೀಪವಾಗಿವೆ. ಯುದ್ಧ, ಅಶಾಂತಿ ವಾತಾವರಣಕ್ಕೆ ಬುದ್ಧ ಸಂದೇಶ ದಿವ್ಯ ಔಷಧವಾಗಿದೆ.
| ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net