

ಕಡಬ: ಕಡಬ ಪೇಟೆ ಸಮೀಪದ ಹಳೇಸ್ಟೇಷನ್ ಎಂಬಲ್ಲಿರುವ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಟ್ಟುಕರೆಯ ಹೂಳೆತ್ತಿ ಕೆರೆಗೆ ನೈಜ ರೂಪ ಒದಗಿಸಿದ ಬಳಿಕ ಕೆರೆ ನೀರಿನಿಂದ ಮೈದುಂಬಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಮ್ಮೂರ ನಮ್ಮ ಕೆರೆ ಯೋಜನೆಯಡಿ ಹಾಗೂ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ ಬಳಿಕ ಕೆರೆಯ ಮೂಲಸ್ವರೂಪ ಮತ್ತೆ ನೋಡುವಂತಾಗಿದೆ.
4 ಎಕರೆ ಪ್ರದೇಶದಲ್ಲಿರುವ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ. ಸುಮಾರು 15 ಅಡಿ ಆಳ ಹೂಳು ತೆಗೆಯಲಾಗಿದೆ. ಕೆರೆಗೆ ನೀರು ತುಂಬಿಸುವ ನಿಟ್ಟಿನಲ್ಲಿ ರಸ್ತೆ ಬದಿ ಒಂದು ಗುಂಡಿ ನಿರ್ಮಿಸಿ ಅದರಲ್ಲಿ ಶೇಖರಣೆಗೊಂಡ ನೀರು ಕಸ ಕಡ್ಡಿಗಳನ್ನು ಆ ಗುಂಡಿಯಲ್ಲಿ ಬಿಟ್ಟು ಕೆರೆಗೆ ನೀರು ಹರಿಸುವ ದೃಷ್ಟಿಯಿಂದ ಎರಡು ಪೈಪ್‌ಗಳನ್ನು ಅಳವಡಿಸಲಾಗಿದೆ. ಇದೀಗ ಎರಡು ಕಡೆ ನೀರು ತುಂಬಿಕೊಂಡಿದೆ. ಮಳೆಗಾದಲ್ಲಿ ಹೆಚ್ಚುವರಿ ನೀರು ಹರಿದು ಹೋಗಲು ಕೆರೆಯ ಇನ್ನೊಂದು ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಮಾರು 7 ಲಕ್ಷ ರೂ. ಹಾಗೂ ಕುಟ್ರುಪ್ಪಾಡಿ ಗ್ರಾ.ಪಂನಿಂದ 2.90 ಲಕ್ಷ ರೂ. ಅನುದಾನ ವ್ಯಯಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ದಿ ನಡೆಸಲು ಅನುದಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆೆಗೆ ಮನವಿ ಸಲ್ಲಿಸಲಾಗಿದೆ. ಆರ್ಥಿಕ ಸಹಾಯ ದೊರೆತರೆ ಈಗಾಗಲೇ ತೆಗೆದ ಹೂಳನ್ನು ಕೆರೆಯ ಸುತ್ತ ಹಾಕಿ ಸಮತಟ್ಟು ಮಾಡಿರುವ ಪ್ರದೇಶದಲ್ಲಿ ಹಣ್ಣಿನ ಗಿಡ ನಾಟಿ ಸೇರಿದಂತೆ ಪ್ರವಾಸಿ ತಾಣವನ್ನಾಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಈ ಹಿಂದೆ ಪೊಟ್ಟುಕೆರೆ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಅಮೃತ ಸರೋವರ ಎಂದು ಹೆಸರಿಟ್ಟು ಅಭಿವೃದ್ಧಿಯ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಆದರೆ ಅದಕ್ಕೆ ಅನುದಾನ ಲಭ್ಯವಾಗಲಿಲ್ಲ. ಬಳಿಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನಿಂದ ಕಾಮಾಗಾರಿ ಕೈಗೆತ್ತಿಕೊಳ್ಳಲಾಗಿದೆ.
ಒಂದು ಕಾಲದಲ್ಲಿ ಕೆರೆ ಭರಪೂರ ನೀರಿನ ಸೆಲೆಯಿಂದ ಕೂಡಿತ್ತು. ಕೆರೆಯ ಕೆಳಗಿನ ಭಾಗದ ಜನರಿಗೆ ಕೃಷಿ, ಜೀವನೋಪಾಯಕ್ಕೆ ನೀರಿನ ಮೂಲವಾಗಿತ್ತು. ಕಾಲಕ್ರಮೇಣ ಕೆರೆಯಲ್ಲಿ ಹೂಳು ತುಂಬಿಕೊಂಡು ಮೈದಾನದ ಸ್ವರೂಪ ಪಡೆದುಕೊಂಡಿತ್ತು. ಅತಿಕ್ರಮಣಕಾರರ ಕಣ್ಣು ಕೆರೆಯ ಪ್ರದೇಶದ ಮೇಲೆ ಬಿತ್ತು. ಹಲವು ವರ್ಷಗಳ ಹಿಂದೆ ಪೊಟ್ಟುಕೆರೆ ಪ್ರದೇಶವನ್ನು ಕೈಬರಹ ಪಹಣಿಯ ತಿದ್ದುಪಡಿ ಮಾಡಿ ಸರ್ಕಾರಿ ಜಮೀನು ಎಂದು ನಮೂದಿಸಿ ಅತಿಕ್ರಮಣ ಮಾಡುವ ಹುನ್ನಾರವೂ ನಡೆದಿತ್ತು. ಗ್ರಾ.ಪಂ ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಿ ಅಭಿವೃದ್ದಿಪಡಿಸುವ ಉದ್ದೇಶದಿಂದ ಮಾಹಿತಿ ಪಡೆದಾಗ ಆ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ನಿರಂತರ ಹೋರಾಟ ಮಾಡಿ ಪಹಣಿಯಲ್ಲಿ ಆಗಿರುವ ತಪ್ಪನ್ನು ಕಂದಾಯ ಇಲಾಖೆ ಸರಿಪಡಿಸುವ ಮೂಲಕ ಕೆರೆ ಉಳಿಸಿಕೊಳ್ಳಲಾಯಿತು.
ನಮ್ಮೂರ ನಮ್ಮ ಕೆರೆ ಯೋಜನೆಯಡಿ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 28 ಕೆರೆ ಅಭಿವೃದ್ಧಿ ಮಾಡಲಾಗಿದೆ. ಈ ಪೈಕಿ ರಾಮಕುಂಜ ಗ್ರಾಮದ ಅಮೈ ಕೆರೆ, ಸವಣೂರು ಗ್ರಾಮದ ಕೊಂಬ ಕೆರೆಯ ಅಭಿವೃದ್ಧಿ ಕಾರ್ಯ ಮುಗಿದಿದೆ. ಈಗಾಗಲೇ ಪೊಟ್ಟುಕೆರೆಯ ಮೊದಲ ಹಂತದ ಕಾಮಗಾರಿ ನಡೆದಿದೆ. ಈಗ ಕೆರೆಯಲ್ಲಿ ನೀರು ತುಂಬಿಕೊಂಡಿದೆ. ಮುಂದಿನ ಯೋಜನೆಗಳನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು. - ಮೇದಪ್ಪ ಗೌಡ ನಾವೂರು, ಶ್ರೀ ಕ್ಷೇ.ಧ.ಗ್ರಾ.ಯೋಜನಾಧಿಕಾರಿ ಕಡಬ ತಾಲೂಕು https://www.vijayavani.net/holiday-declaration-for-schools-in-udupi https://www.vijayavani.net/subrahmanya-puthur-road-waterlogged-traffic-disrupted