

ಕೆ.ಆರ್.ನಗರ: ಹೂಳು ತುಂಬಿಕೊಂಡು ನಿರುಪಯುಕ್ತವಾಗಿರುವ ಕೆರೆಗಳನ್ನು ಪುನಶ್ಚೇತನಗೊಳಿಸಿ ಜನ ಮತ್ತು ಜಾನುವಾರುಗಳಿಗೆ ಅನುಕೂಲ ಕಲ್ಪಿಸುತ್ತಿರುವ ಡಾ.ವಿರೇಂದ್ರಹೆಗ್ಗಡೆ ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಸಿ.ಮಹದೇವಸ್ವಾಮಿ ಹೇಳಿದರು.
ತಾಲೂಕಿನ ಮಂಡಿಗನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯ ವತಿಯಿಂದ ಇತ್ತೀಚೆಗೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಳಿಸಿರುವ 781ನೇ ಹೊಸಕಟ್ಟೆ ಕೆರೆಯ ನಾಮಫಲಕ ಅನಾವರಣ, ಹಸ್ತಾಂತರ ಮತ್ತು ಕೆರೆಯಂಗಳದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೋಜನೆಯ ವತಿಯಿಂದ ಕೆರೆಗಳಿಗೆ ಕಾಯಕಲ್ಪ ನೀಡುವ ಕಾರ್ಯವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಇಲ್ಲಿಯವರೆಗೆ 780 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಕೆರೆಗಳು ನೀರು ತುಂಬಿಕೊಂಡರೆ ರಾಜ್ಯದ ಸಹಸ್ರಾರು ಎಕರೆ ಪ್ರದೇಶಕ್ಕೆ ನೀರುಣಿಸಲು ಸಾಧ್ಯವಾಗಬಹುದು. ಆದರೆ ಸಾಕಷ್ಟು ಕೆರೆಗಳು ನಿರ್ವಹಣೆಯಿಲ್ಲದೆ ಗಿಡಗಂಟೆಗಳು ಬೆಳೆದು ಹೂಳು ತುಂಬಿಕೊಂಡು ನೀರು ಸಂಗ್ರಹಣೆಯ ಸಾಮರ್ಥ್ಯವನ್ನು ಕಳೆದುಕೊಂಡಿವೆ ಎಂದರು.
ಇಡೀ ಗ್ರಾಮಕ್ಕೆ ನೀರುಣಿಸುತ್ತಿದ್ದ ಕೆರೆಗಳಿದ್ದರೂ ಹನಿ ನೀರಿಗಾಗಿ ಪರದಾಡುತ್ತಿರುವ ರೈತರು ಮತ್ತು ನೀರಿಗಾಗಿ ಕಿ.ಮೀ. ಗಟ್ಟಲೆ ಅಲೆಯುತ್ತಿರುವ ಮಹಿಳೆಯರ ಸಂಕಷ್ಟ ಗಮನಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು 2016ರಲ್ಲಿ ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿಯೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಪ್ರಾರಂಭಿಸಿದರು. ಪುನಶ್ಚೇತನಗೊಂಡ 780 ಕೆರೆಗಳ ಪೈಕಿ 351ರಲ್ಲಿ ಬರಗಾಲದಲ್ಲಿಯೂ ನೀರು ತುಂಬಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಪುನಶ್ಚೇತನಗೊಂಡ ಕೆರೆಯನ್ನು ಹೊಸ ಅಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜೇಗೌಡ ಅವರಿಗೆ ಹಸ್ತಾಂತರಿಸಲಾಯಿತು. ಕೆರೆಯ ಸುತ್ತಲಿನ ಏರಿಯ ಮೇಲೆ ಅರಣ್ಯ ಇಲಾಖೆಯ ವತಿಯಿಂದ ಗಿಡ ನೆಡಲಾಯಿತು.
ಹೊಸಕಟ್ಟೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಘು ಅಧ್ಯಕ್ಷತೆ ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿ ಪ್ರಸನ್ನಕುಮಾರ್, ಗ್ರಾಪಂ ಅಧ್ಯಕ್ಷ ಮತ್ತು ಕೆರೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜೇಗೌಡ ಮಾತನಾಡಿದರು. ಹೊಸ ಅಗ್ರಹಾರ ಗ್ರಾಪಂ ಸದಸ್ಯೆ ಸುಕನ್ಯಾ ಬೆಟ್ಟೇಗೌಡ, ಅಭಿವೃದ್ಧಿ ಅಧಿಕಾರಿ ಶಲ್ಯಾ, ಎಸ್‌ಕೆಡಿಆರ್‌ಡಿಪಿ ಒಕ್ಕೂಟದ ಅಧ್ಯಕ್ಷೆ ಹಂಪಾಪುರ ರೂಪಾ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸಂಪತ್‌ಕುಮಾರ್, ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿ ರಾಧಾ, ಗ್ರಾಮದ ಮುಖಂಡರಾದ ರಾಜೇಗೌಡ, ಮೀನಾಕ್ಷಮ್ಮ, ಶಿವರಾಮೇಗೌಡ ಹಾಜರಿದ್ದರು.