ಬಳ್ಪ ಬೋಗಾಯನ ಕೆರೆಗೆ ಕಾಯಕಲ್ಪ

Bogarayana kere
Published on

ರತ್ನಾಕರ ಸುಬ್ರಹ್ಮಣ್ಯ

ಬಳ್ಪದ ಐತಿಹಾಸಿಕ ಬೋಗಾಯನ ಕೆರೆಗೆ ಅಭಿವೃದ್ಧಿ ಭಾಗ್ಯ ಒದಗಿದೆ. 1.40 ಎಕರೆ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 2 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಕಡಬ ತಾಲೂಕು ಬಳ್ಪ ಪೇಟೆ ಸಮೀಪವಿರುವ ಕೆರೆ ಹಲವಾರು ವರ್ಷಗಳಿಂದ ಹೂಳು ತುಂಬಿಕೊಂಡು ಬರಡಾಗಿತ್ತು. ಪೂರ್ಣ ರೀತಿಯಲ್ಲಿ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಾ ಬಂದಿದ್ದರು. ಬಳ್ಪ ಗ್ರಾಮ ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಯಾದ ಸಂದರ್ಭ ಅಭಿವೃದ್ಧಿಯಾಗುವ ನಿರೀಕ್ಷೆ ಹೆಚ್ಚಿತ್ತು. ಈಗ ಸಣ್ಣ ನೀರಾವರಿ ಇಲಾಖೆಯಿಂದ 2 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ.

ಮೊದಲ ಹಂತದ ಅನುದಾನದಲ್ಲಿ ಪ್ರಾಥಮಿಕ ಪ್ರಾಶಸ್ತ್ಯದ ಕಾಮಗಾರಿ ನಡೆಸಲಾಗುತ್ತದೆ. ಕೆರೆಯ ಹೂಳು ತೆರವು, ರಸ್ತೆ, ಮೇಲ್ಭಾಗದ ನಿರುಪಯುಕ್ತ ನೀರು ಹರಿದು ಬಾರದಂತೆ ತಡೆಗೋಡೆ, ಕಾಲುವೆ ನಿರ್ಮಾಣವಾಗಲಿದೆ. ಎರಡನೇ ಹಂತದ ಅನುದಾನದಲ್ಲಿ ಪ್ರವಾಸಿ ತಾಣದ ಹಿನ್ನೆಲೆಯನ್ನು ಇರಿಸಿಕೊಂಡು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.

400 ವರ್ಷ ಇತಿಹಾಸ: ಬೋಗಾಯನ ಕೆರೆ ಸುಮಾರು 400 ವರ್ಷಗಳ ಇತಿಹಾಸ ಹೊಂದಿದೆ. ಎತ್ತರ ಭಾಗದಲ್ಲಿರುವುದರಿಂದ ಕೆಳಗಿನ ಭಾಗದ ಭತ್ತದ ಗದ್ದೆಗಳಿಗೆ ನಿರುಣಿಸಲು ಸಹಾಯಕವಾಗಿತ್ತು. ವಿಜಯನಗರದ ಅರಸರು ಶಾಸನದಲ್ಲಿ ಕೆರೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ವಿಜಯನಗರದ ಸಾಮಂತನಾಗಿದ್ದ ಕದಂಬರ ತುಂಡರಸ ಬೋಗರಾಯವರ್ಮ ಕಡಬ ಪ್ರದೇಶವನ್ನು ಆಳುತ್ತಿದ್ದ ಕಾಲದಲ್ಲಿ ಎರಡು ಕೆರೆಗಳು ನಿರ್ಮಾಣಗೊಂಡಿದ್ದವು. ಇದರಲ್ಲಿ ಒಂದು ಕಡಬದಲ್ಲಿ, ಮತ್ತೊಂದನ್ನು ಬಳ್ಪದಲ್ಲಿ ನಿರ್ಮಿಸಿರುವದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಬೋಗರಾಯವರ್ಮ ನಿರ್ಮಿಸಿದ ಕಾರಣ ಬೋಗಾಯನ ಕೆರೆ ಎಂದು ಪ್ರಸಿದ್ಧಿ ಪಡೆದಿದೆ.

ಬಳ್ಪ ಪೇಟೆ ಸಮೀಪವೇ ಕೆರೆ: ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದಿಂದ 12ಕಿ.ಮೀ ದೂರದ ಬಳ್ಪ ಪೇಟೆಯ ಪಕ್ಕದಲ್ಲಿ ರಸ್ತೆಗೆ ತಾಗಿಕೊಂಡು ಈ ಕೆರೆ ಇದೆ. ಸುಮಾರು 1.40 ಎಕರೆಗೆ ಮೇಲ್ಪಟ್ಟು ಸರ್ಕಾರಿ ಪರಬೊಂಕು ಎಂದು ಸರ್ಕಾರಿ ಪಹಣಿ ಪತ್ರದಲ್ಲಿ ದಾಖಲೆ ಇದೆ. ಪ್ರಸ್ತುತ ಒಂದುವರೆ ಎಕರೆ ವ್ಯಾಪ್ತಿ ಹಾಗೂ 30 ಅಡಿಗಿಂತಲೂ ಆಳ ಹೊಂದಿದ್ದು, 25-30 ವರ್ಷಗಳ ಹಿಂದೆ ಈ ಒಂದು ಬದಿಗೆ ತಡೆಗೋಡೆ ನಿರ್ಮಿಸಲಾಗಿತ್ತು. 8 ವರ್ಷಗಳ ಹಿಂದೆ ಹೂಳು ಎತ್ತುವ ಕೆಲಸ ಕೂಡ ನಡೆದಿದೆ.

ಬೋಗಾಯನಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 2ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸುವ ಯೋಜನೆಯೂ ಇದೆ.

-ಎಸ್.ಅಂಗಾರ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು

ಎರಡು ಹಂತದಲ್ಲಿ ಕೆರೆಯ ಪುನಶ್ಚೇತನ ಕಾರ್ಯ ನಡೆಯಲಿದೆ. ಆಧುನಿಕ ತಂತ್ರಜ್ಞಾನ ಬಳಸಿ ನೀರನ್ನು ಶುದ್ಧಿಕರಿಸಿ ಬಳ್ಪ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವ ಚಿಂತನೆ ಇದೆ.

-ಮೋನಪ್ಪ ಡಿ.ಸುಬ್ರಹ್ಮಣ್ಯ, ಪಿಡಿಒ ಬಳ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net