4 ವರ್ಷದಲ್ಲಿ 185 ಕೆರೆಗಳ ಪುನರುಜ್ಜೀವನ: ಪಾಲಕೆ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್

palike lake
Published on

ಬೆಂಗಳೂರು: ಮುಂದಿನ ನಾಲ್ಕು ವರ್ಷಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ 185 ಕೆರೆಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತೆ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ಬೆಂಗಳೂರು ಚೇಂಬರ್ ಆಫ್ ಕಾಮರ್ಸ್ (ಬಿಸಿಐಸಿ) ಸೋಮವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಮಿತಿಯೊಳಗೆ ಒಟ್ಟು 202 ಕೆರೆಗಳಿವೆ. ಈ ಪೈಕಿ 17 ಕೆರೆಗಳನ್ನು ಮಿತಿಮೀರಿ ಒತ್ತುವರಿ ಆಗಿರುವ ಕಾರಣ ಪುನರುಜ್ಜೀವನ ಕೈಗೊಳ್ಳಲಾಗದ ಸ್ಥಿತಿಯಲ್ಲಿವೆ. ಉಳಿದವುಗಳನ್ನು ಹಂತ-ಹಂತವಾಗಿ ಅಭಿವೃದ್ಧಿಗೊಳಿಸಿ ನಗರದ ಜಲ ಮೂಲಗಳನ್ನು ಸಂರಕ್ಷಣೆ ಮಾಡಲಾಗುವುದು ಎಂದರು.

ನಗರದಲ್ಲಿರುವ ಹಾಲಿ ಇರುವ ಕೆರೆಗಳು ಒತ್ತುವರಿಗೆ ಒಳಗಾಗಿವೆ. ಕೆಲವೊಂದಕ್ಕೆ ಚರಂಡಿ ನೀರು ಹರಿಸುತ್ತಿದ್ದು, ಘನತ್ಯಾಜ್ಯ ಕೂಡ ಸುರಿಯಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ರಾಸಾಯನಿಕಗಳನ್ನು ಕೂಡ ಕರೆಗಳಿಗೆ ಹರಿಸುತ್ತಿರುವ ದೂರು ಕೇಳಿಬಂದಿದೆ. ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಹಣದ ನೆರವು ಇಲ್ಲದಿರುವುದು, ಸಿಬ್ಬಂದಿ ಕೊರತೆ ಹಾಗೂ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯೂ ಉಂಟಾಗಿದೆ. ತಾಂತ್ರಿಕ ಜ್ಞಾನದ ಕೊರತೆಯೊಂದಿಗೆ ಭೂತಾಂತ್ರಿಕ ವಿಷಯಗಳ ಅರಿವು ಇಲ್ಲದಿರುವುದು ಕೂಡ ಕೆರೆ ಪುನರುಜ್ಜೀವನ ಕಾರ್ಯ ನಿಧಾನವಾಗುತ್ತಿರುವುದು ವಿಷಾದನೀಯ ಎಂದರು.

ಹೈಕೋರ್ಟ್ ಒಪ್ಪಿಗೆ ಬಳಿಕ ಚಾಲನೆ:

ನಗರದಲ್ಲಿರುವ ಜಲ ತಾಣಗಳನ್ನು ಪುನಶ್ಚೇತನಗೊಳಿಸಲು ಕಾರ್ಪೊರೇಟ್ ಹಾಗೂ ಸಾರ್ವಜನಿಕ ಸಂಘ-ಸಂಸ್ಥೆಗಳ ಸಹಯೋಗ ಪಡೆಯಲಾಗುವುದು. ಈ ಬಗ್ಗೆ ಈಗಾಗಲೇ ಕೆಲ ಸಭೆಗಳನ್ನು ನಡೆಸಿ ರೂಪುರೇಶೆ ಸಿದ್ಧಪಡಿಸಲಾಗಿದೆ. ಸಮುದಾಯವನ್ನು ತೊಡಗಿಸಿದ ಕೆರೆ ಸಂರಕ್ಷಣಾ ನೀತಿ-2024 ಅನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದು, ಇದಕ್ಕೆ ಒಪ್ಪಿಗೆ ದೊರೆತ ಕೂಡಲೇ ಸಾರ್ವಜನಿಕರ ಸಲಹೆಗಳೊಂದಿಗೆ ಮುಂದುವರಿಯಲಾಗುವುದು. ಮಹಾನಗರದಲ್ಲಿರುವ ನೀರಿನ ಸಮಸ್ಯೆಯಿಂದಾಗಿ ಕೆರೆಗಳ ಪುನಶ್ಚೇತನ ಕಾರ್ಯಕ್ಕೆ ಪಾಲಿಕೆ ಕ್ರಮ ಪೂರಕವಾಗಲಿದೆ ಎಂದು ಪ್ರೀತಿ ಗೆಹ್ಲೋಟ್ ತಿಳಿಸಿದರು.

ಬಿಸಿಐಸಿಯ ಸಿಎಸ್‌ಆರ್ ಮತ್ತು ಸಾಮಾಜಿಕ ಬ್ರ್ಯಾಂಡ್ ಪರಿಣತರ ಸಮಿತಿಯ ಚೇರ‌್ಮನ್ ಜಿ.ವಿ. ರಾವ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಸರ್ಕಾರ, ಉದ್ಯಮಿಗಳು ಮತ್ತು ನಾಗರಿಕರ ಸಮೂಹ, ಲಾಭರಹಿತ ಸಮೂಹಗಳು ಕೈಜೋಡಿಸಿ ನೀರಿನ ಸಮಸ್ಯೆಯನ್ನು ನಿಭಾಯಿಸಬಹುದು. ಆದರೆ, ಕಾನೂನು ಸಮಸ್ಯೆಯಿಂದಾಗಿ ಕೆರೆಗಳ ಪುನರುಜ್ಜೀವನ ಕೈಗೊಳ್ಳಲು ಮುಂದೆ ಬರಲು ಕಾರ್ಪೋರೇಟ್ ಕಂಪನಿಗಳು ಹಿಂದೇಟು ಹಾಕುತ್ತಿವೆ. ತನ್ನ ನೀತಿ ಚೌಕಟ್ಟಿನ ಮೂಲಕ ಕೆರೆ ಪುನರುಜ್ಜೀವನಕ್ಕಾಗಿ ಪಾಲುದಾರಿಕೆಗೆ ಮಾರ್ಗಗಳನ್ನು ಬಿಬಿಎಂಪಿ ಪರಿಣಾಮಕಾರಿಯಾಗಿ ಜಾರಿಗೆ ತಂದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ನಗರದಲ್ಲಿ ಈಗಾಗಲೇ ವಿವಿಧ ಜಲ ಸಂರಕ್ಷಣೆ ಉಪಕ್ರಮಗಳನ್ನು ಸಂಸ್ಥೆ ಕೈಗೊಂಡಿದೆ. ಹಾಲಿ ನೀರಿನ ಸಮಸ್ಯೆಯನ್ನು ಗಮನಿಸಿದರೆ ಕೆರೆಗಳ ಪುನಶ್ಚೇತನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಪೊರೇಟ್ ಹಾಗೂ ನಾಗರಿಕ ಸಂಘ-ಸಂಸ್ಥೆಗಳ ಜತೆಯಲ್ಲಿ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಿರುವ ಬಿಬಿಎಂಪಿ ನಿಲುವನ್ನು ಬಿಸಿಐಸಿ ಬೆಂಬಲಿಸಲಿದೆ.

- ಡಾ. ಎಸ್.ದೇವರಾಜನ್, ಬಿಸಿಐಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net