ಹೆತ್ತ ಕರಳುನಿಂದಲೇ ತಿರಸ್ಕಾರ, ಜನತಾ ದರ್ಶನದಲ್ಲಿ ಅಲವತ್ತುಕೊಂಡ ವೃದ್ದೆ, ಸುಮೊಟೋ ದಾಖಲಿಸಿ ಎಂದ ಡಿಸಿ !!

BOLEGAM LADY
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಜನತಾ ದರ್ಶನದಲ್ಲಿ ಪುತ್ಥಳಾಬಾಯಿ ಹ.ಚನಗೊಂಡ ಜಿಲ್ಲಾಧಿಕಾರಿ ಟಿ.ಭೂಬಾಲನ್ ಎದುರು ಅಳಲು ತೋಡಿಕೊಂಡಳು. ಎಸ್‌ಪಿ ಸೋನವಾನೆ ರಿಷಿಕೇಶ ಭಗವಾನ ಮತ್ತಿತರರಿದ್ದಾರೆ.
Published on

ವಿಜಯಪುರ: ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದು, ಭೋಗಕ್ಕೆ ಜಮೀನಿದ್ದರೂ ಹೆತ್ತಮ್ಮನನ್ನು ನೋಡಿಕೊಳ್ಳದ ಪುತ್ರರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ನಡೆದ ಜನತಾ ದರ್ಶನದಲ್ಲಿ ಇಂಡಿ ತಾಲೂಕಿನ ಬೋಳೆಗಾಂವ ಗ್ರಾಮದ ಪುತ್ಥಳಾಬಾಯಿ ಹಣಮಂತ ಚನಗೊಂಡ (72) ಜೀವನೋಪಾಯಕ್ಕಾಗಿ ಜಿಲ್ಲಾಧಿಕಾರಿ ಎದುರು ಅಂಗಲಾಚಿದಳು.

ಬೋಳೆಗಾಂವದಲ್ಲಿ ಪತಿ ಹಣಮಂತನ ಹೆಸರಿನಲ್ಲಿದ್ದ 6.5 ಎಕರೆ ಜಮೀನನ್ನು ಪುತ್ರರು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಅಲ್ಲದೇ, ಜಮೀನಿನಲ್ಲಿ ಕಾಲುವೆ ಹರಿದಿದ್ದು, ಈ ಕಾಲುವೆಗಾಗಿ ಸ್ವಾಧೀನಪಡಿಸಿಕೊಂಡ 2.19 ಎಕರೆ ಜಮೀನಿಗೆ ಪರಿಹಾರ ಕೂಡ ಬಂದಿದೆ. ಆ ಪರಿಹಾರ ಕೂಡ ನೀಡುತ್ತಿಲ್ಲ. ಜೀವನೋಪಾಯಕ್ಕೆ ಹಣವೂ ನೀಡುತ್ತಿಲ್ಲ ಎಂದು ಪುತ್ಥಳಾಬಾಯಿ ಜನತಾದರ್ಶನದಲ್ಲಿ ಅಲವತ್ತುಕೊಂಡಳು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ‘ಪ್ರತಿ ತಿಂಗಳು ಮಕ್ಕಳಿಂದ ಪರಿಹಾರ ಹಾಗೂ ಆಸ್ತಿಗಳಿದ್ದರೆ ಮಕ್ಕಳಿಂದ ಆ ಆಸ್ತಿ ಹಿಂಪಡೆದು, ಪಾಲಕರಿಗೆ ಮರಳಿಸಲು ಕಾನೂನಿನಲ್ಲಿ ಅವಕಾಶವಿರುವುದರಿಂದ ಹಿರಿಯ ನಾಗರಿಕರಿಗೆ ಮಕ್ಕಳು ನೋಡಿಕೊಳ್ಳದಿದ್ದಲ್ಲಿ ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಬೇಕು. ಈ ದೂರಿನನ್ವಯ ಉಪವಿಭಾಗಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಈ ಸಮಸ್ಯೆಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಸ್ವಯಂ ಪ್ರಕರಣ ದಾಖಲಿಸಿ ವೃದ್ಧೆಗೆ ಪರಿಹಾರ ಕಲ್ಪಿಸಲು ಸ್ಥಳದಲ್ಲಿಯೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net