

ಸಂಡೂರು: ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುವ 217 ರೈತರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 14 ಅರ್ಜಿ ಸ್ವೀಕೃತವಾಗಿವೆ. ಉಳಿದ ಅರ್ಜಿಗಳು ಗ್ರಾಪಂ ಮಟ್ಟದಲ್ಲಿ ತಿರಸ್ಕೃತಗೊಂಡಿದ್ದು, ಮರು ಪರಿಶೀಲನೆ ಮಾಡಬೇಕು. ಇಲ್ಲದಿದ್ದಲ್ಲಿ ರೈತರೊಂದಿಗೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ್ ಹೇಳಿದರು.
ತಾಲೂಕಿನ ಭುಜಂಗನಗರ ಗ್ರಾಪಂನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಅರಣ್ಯಭೂಮಿ ಉಳುಮೆದಾರರ ಸಹಯೋಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸೋಮವಾರ ಮಾತನಾಡಿದರು.
ಪಿಡಿಒ ಹನುಮಂತಪ್ಪ ಮಾತನಾಡಿ, ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ತಿರಸ್ಕೃತ ಅರ್ಜಿಗಳನ್ನು ತೆಗೆದುಕೊಳ್ಳಬೇಕೊ ಬೇಡವೋ ಎಂಬುದರ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕು ಕಾರ್ಯದರ್ಶಿ ಖಲಂದರ್ ಬಾಷಾ, ದೇವದಾಸಿ ಮಹಿಳೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ತಾಲೂಕು ಕಾರ್ಯದರ್ಶಿ ಎಚ್.ದುರುಗಮ್ಮ, ಪ್ರಮುಖರಾದ ಕುಮಾರಸ್ವಾಮಿ, ರಮೇಶ, ವೆಂಕಟೇಶ, ಮಾರೇಶ, ಕುಮಾರಪ್ಪ ಮುಂತಾದವರಿದ್ದರು. ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡಬೇಕೆಂದು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.