

ಕಡೂರು: ಶೋಕಿಗೋಸ್ಕರ ರಾಜಕಾರಣ ಮಾಡುವವರನ್ನು ತಿರಸ್ಕರಿಸಿ, ಜನರ ಸೇವೆ ಮಾಡುವ ಕಾಂಗ್ರೆಸ್ ಬಲಪಡಿಸುವ ಮೂಲಕ ಈ ಬಾರಿ ಬದಲಾವಣೆಗೆ ಅವಕಾಶ ಕಲ್ಪಿಸಿಕೊಡಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಶ್ರೇಯಸ್ ಪಟೇಲ್ ಮನವಿ ಮಾಡಿದರು.
ಪಟ್ಟಣಗೆರೆ, ಸರಸ್ವತೀಪುರ ಗ್ರಾಮಗಳಲ್ಲಿ ಗುರುವಾರ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿ, ಕ್ಷೇತ್ರಕ್ಕೇ ಬರದೆ ಚುನಾವಣೆ ಸಮಯದಲ್ಲಿ ಬರುವ ಸಂಸದರಿಗೆ ತಕ್ಕ ಪಾಠ ಕಲಿಸಿ. ನಿಮ್ಮ ಮನೆ ಮಗನಂತೆ ಇರುತ್ತೇನೆ. ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಸದಾ ಕಾಲ ಕ್ರಿಯಾಶೀಲವಾಗಿರುತ್ತೇನೆ ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕಳೆದ ಬಾರಿ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಪರ ಕಾಂಗ್ರೆಸ್ ಪ್ರಚಾರ ಮಾಡಿ ಗೆಲ್ಲಿಸಿತು. ನಂತರ ಬಹಳಷ್ಟು ಬಾರಿ ಕರೆದರೂ ಕಡೂರಿಗೆ ಬರಲಿಲ್ಲ. ಅವರ ಪರ ಪ್ರಚಾರ ಮಾಡಿದ್ದಕ್ಕಾಗಿ ನಾಚಿಕೆ ಪಡುವಂತಾಗಿದೆ. ಪ್ರಜ್ವಲ್ ರೇವಣ್ಣ ಕಡೂರು ಕ್ಷೇತ್ರದ ಗ್ರಾಮಗಳ ಹೆಸರನ್ನು ನಿರರ್ಗಳವಾಗಿ ಹೇಳಿದರೆ ರಾಜಕೀಯವನ್ನೇ ಬಿಡುತ್ತೇನೆ ಎಂದು ಸವಾಲು ಹಾಕಿದರು.
ಸರಸ್ವತೀಪುರ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಬೀರೂರು ದೇವರಾಜ್, ಶರತ್ ಕೃಷ್ಣಮೂರ್ತಿ, ಭಂಡಾರಿ ಶ್ರೀನಿವಾಸ್, ಕೆ.ಎಂ.ಮೋಹನ್‌ಕುಮಾರ್, ಪಂಚನಹಳ್ಳಿ ಪ್ರಸನ್ನ, ಕೃಷ್ಣ್ಣಪ್ಪ, ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಕೆ.ಎಚ್.ಶಂಕರ್, ರುದ್ರೇಗೌಡ, ಪುಟ್ಟೇಗೌಡ, ಸತೀಶ್ ನಾಯ್ಕ, ಲೋಕೇಶ್ ಇತರರಿದ್ದರು.