

ಬೆಂಗಳೂರು: ಪಾಲಿಕೆಯಿಂದ ವಿವಿಧ ಸಂಘ, ಸಂಸ್ಥೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಉದ್ದೇಶಗಳಿಗೆ ಕಡಿಮೆ ಹಣಕ್ಕೆ ಗುತ್ತಿಗೆ ಅಥವಾ ಲೀಸ್ ನೀಡಲಾಗಿರುವ ಆಸ್ತಿಯನ್ನು ಮರುಹರಾಜು ಮಾಡಿ ಮಾರುಕಟ್ಟೆ ಬೆಲೆಗೆ ಗುತ್ತಿಗೆ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಬ್ರಿಟಿಷರ ಆಡಳಿತವಿದ್ದ ಕಾಲದಿಂದಲೂ ಪಾಲಿಕೆಯ ಸ್ವತ್ತಿನ ವಿವಿಧ ಆಸ್ತಿಗಳನ್ನು ಶಾಲೆ-ಕಾಲೇಜು, ಆಸ್ಪತ್ರೆ, ಪೆಟ್ರೋಲ್ ಬಂಕ್, ನಿಗಮ ಮಂಡಳಿಗಳು, ಸರ್ಕಾರಿ ಇಲಾಖೆಗಳು ಸಾಮಾಜಿಕ ಕಲ್ಯಾಣ ಉದ್ದೇಶಕ್ಕಾಗಿ ಗುತ್ತಿಗೆ ಹಾಗೂ ಭೋಗ್ಯಕ್ಕೆ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಪಾಲಿಕೆ ಈವರೆಗೆ ಒಟ್ಟು 348 ಆಸ್ತಿಗಳನ್ನು ಗುತ್ತಿಗೆ ನೀಡಿದೆ. ಅದರಲ್ಲಿ 195 ಆಸ್ತಿಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದೆ. ಗುತ್ತಿಗೆ ಅವಧಿ ಪೂರೈಸಿರುವ ಕಟ್ಟಡಗಳ ಮರುಹರಾಜು ಮಾಡಿ, ಮಾರುಕಟ್ಟೆ ದರದಂತೆ ಮರುಗುತ್ತಿಗೆ ನೀಡಲು ಯೋಜನೆ ರೂಪಿಸಿಕೊಂಡಿದೆ.
6 ವಲಯಗಳಿಂದ 9.28 ಕೋಟಿ ರೂ. ಬಾಕಿ: ಪಾಲಿಕೆಯಿಂದ ನೀಡಲಾದ ಆಸ್ತಿಗಳಿಗೆ ಪ್ರತಿ ಚದರ ಅಡಿಗೆ 1 ರೂ.ನಿಂದ 10 ರೂ.ಗಳಂತೆ ಬಾಡಿಗೆ ನಿಗದಿಪಡಿಸಲಾಗಿರುತ್ತದೆ. ಇಷ್ಟು ಕಡಿಮೆ ಬಾಡಿಗೆಯಿದ್ದರೂ ಪಾಲಿಕೆಗೆ ವಾರ್ಷಿಕ ಅಂದಾಜು 1.32 ಕೋಟಿ ರೂ. ಬಾಡಿಗೆ ಆದಾಯ ಬರುತ್ತಿದೆ. ಹಲವು ಸಂಘ-ಸಂಸ್ಥೆಗಳು ಸರಿಯಾಗಿ ಬಾಡಿಗೆ ಪಾವತಿಸದಿರುವುದು ಇದಕ್ಕೆ ಕಾರಣ. 8.91 ಕೋಟಿ ರೂ. ಬಾಡಿಗೆ ಮತ್ತು ಬಡ್ಡಿ ಹಣ 36 ಲಕ್ಷ ರೂ. ಸೇರಿ ಒಟ್ಟು 9.28 ಕೋಟಿ ರೂ. ಬಾಕಿ ವಸೂಲಿಯಾಗಬೇಕಿದೆ.
ವಲಯವಾರು ಗುತ್ತಿಗೆ ಆಸ್ತಿ ವಿವರ: ಪೂರ್ವ ವಲಯದಲ್ಲಿ 121 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದ್ದು, 44 ಆಸ್ತಿ ಗುತ್ತಿಗೆ ಒಪ್ಪಂದ ಅವಧಿ ಪೂರ್ಣಗೊಂಡಿದೆ. 5.96 ಕೋಟಿ ರೂ. ಬಾಕಿಯಿದೆ. ಪಶ್ಚಿಮ ವಲಯದ 123 ಆಸ್ತಿಗಳಲ್ಲಿ 92 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು 56.10 ಲಕ್ಷ ರೂ. ಬಾಕಿಯಿದೆ. ದಕ್ಷಿಣ ವಲಯದ 101 ಆಸ್ತಿಗಳಲ್ಲಿ 56 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು 2.54 ಕೋಟಿ ರೂ. ಬಾಕಿಯಿದೆ. ಮಹದೇವಪುರ ವಲಯದಲ್ಲಿ 1 ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆ ಪೂರ್ಣಗೊಂಡು 25 ಸಾವಿರ ರೂ. ಬಾಕಿ ಉಳಿದಿದೆ. ಯಲಹಂಕ ವಲಯದಲ್ಲಿ 1 ಆಸ್ತಿ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು, 20.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಆರ್.ಆರ್. ನಗರ ವಲಯದಲ್ಲಿ ಗುತ್ತಿಗೆ ನೀಡಲಾದ 1 ಆಸ್ತಿಯ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಬೊಮ್ಮನಹಳ್ಳಿ ಮತ್ತು ದಾಸರಹಳ್ಳಿ ವಲಯದಲ್ಲಿ ಯಾವುದೇ ಆಸ್ತಿ ಗುತ್ತಿಗೆ ನೀಡಲಾಗಿಲ್ಲ.
ಪಾಲಿಕೆಯಿಂದ ವಿವಿಧ ಸಂಘ- ಸಂಸ್ಥೆಗಳಿಗೆ ನೀಡಲಾದ ಗುತ್ತಿಗೆ ಪೂರ್ಣಗೊಂಡ ಆಸ್ತಿಗಳನ್ನು ಮಾರುಕಟ್ಟೆ ದರದಂತೆ ಮರುಹರಾಜು ಮಾಡಲಾಗುವುದು. ಹಾಲಿ ಆಸ್ತಿಯಲ್ಲಿ ಕಾರ್ಯನಿರ್ವಹಿಸು ತ್ತಿರುವವರು ಬಾಕಿ ಪಾವತಿಸಿದರೆ, ಅವರಿಗೆ ಆದ್ಯತೆ ಮೇರೆಗೆ ಮರುಗುತ್ತಿಗೆ ನೀಡಲಾಗುವುದು. ಅವರು ಗುತ್ತಿಗೆ ಪಡೆಯದಿದ್ದರೆ ಹೊಸಬರಿಗೆ ನೀಡಲಾಗುವುದು. | ಎಂ. ಗೌತಮ್ ಕುಮಾರ್ ಮೇಯರ್