ಕೊಲೆ ಪ್ರಕರಣ ಮರು ತನಿಖೆ ಮಾಡಿ

ಫೋಟೋ ಶೀರ್ಷಿಕೆ 30 ಸಿಆರ್_ಪಿ-1 ಎ.
ಸೌಜನ್ಯಾಳ ಕೊಲೆ ಪ್ರಕರಣವನ್ನು ಮರು ತನಿಖೆಮಾಡಬೇಕು ಎಂದು ಒತ್ತಾಯಿಸಲು ಚನ್ನರಾಯಪಟ್ಟಣದಲ್ಲಿ ಏರ್ಪಡಿಸಿದ್ದ ಜನಾಂದೋಲನಾ ಸಭೆಯಲ್ಲಿ ಹಿಂದು ಜಾಗರಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮ್ಮರೊಡಿ ಮಾತನಾಡಿದರು. ರಮಾ, ಪರಶುರಾಮು, ಕುಸುಮಾ, ಅರಳಾಪುರ ಮಂಜೇಗೌಡ ಸೇರಿ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗುವರೆಗೆ ಹೋರಾಟ ಮಾಡಬೇಕಿದೆ. ಇದಕ್ಕಾಗಿ ರಾಜ್ಯದೆಲ್ಲೆಡೆ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಜನರ ಸಹಕಾರ ಬೇಕು ಎಂದು ಹಿಂದು ಜಾಗರಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮ್ಮರೊಡಿ ಹೇಳಿದರು.

ತಾಲೂಕು ರೈತಸಂಘ, ಹಸಿರು ಸೇನೆ, ದಲಿತ ಸಂಘಟನೆ, ಬೀದಿಬದಿ ವ್ಯಾಪಾರಿಗಳ ಸಂಘ, ಭೂಮಿ ಕ್ಷೇಮಾಭಿವೃದ್ಧಿ ಸಂಘ, ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ, ಸೌಜನ್ಯಾ ಪರ ಹೋರಾಟ ಸಮಿತಿಯು ಇತ್ತೀಚೆಗೆ ಪಟ್ಟಣದಲ್ಲಿ ಏರ್ಪಡಿಸಿದ್ದ ಜನಾಂದೋಲನಾ ಸಭೆಯಲ್ಲಿ ಅವರು ಮಾತನಾಡಿದರು. 2012ರಲ್ಲಿ ಕಾಲೇಜಿಗೆ ಹೋದ ಸೌಜನ್ಯಾ ಮನೆಗೆ ಹಿಂದಿರುಗಲಿಲ್ಲ. 17 ವರ್ಷದ ಅಪ್ರಾಪ್ತೆ ಸೌಜನ್ಯಾಳನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಸೌಜನ್ಯಾ ಕುಟುಂಬಕ್ಕೆ ಅನ್ಯಾಯವಾಗಿದೆ. ಇದರ ವಿರುದ್ಧ ಹೋರಾಟ ಮಾಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಹೋರಾಟಕ್ಕೆ ಜನರ ಸಂಖ್ಯೆಮುಖ್ಯವಲ್ಲ. ಹೋರಾಟ ಮಾಡುವ ಮನಸುಗಳು ಮುಖ್ಯ ಎಂದು ಹೇಳಿದರು.

ರಾಜ್ಯದಲ್ಲಿ ಈ ಹೋರಾಟಕ್ಕೆ ಮುನ್ನುಡಿ ಬರೆಯಬೇಕಿದೆ. ಸೌಜನ್ಯಾಳಿಗೆ ಆದ ಅನ್ಯಾಯ ಮುಂಬರುವ ದಿನಗಳಲ್ಲಿ ಯಾವ ಮಹಿಳೆಗೂ ಆಗಬಾರದು. ನ್ಯಾಯ ಸಿಗುವರೆಗೆ ಹೋರಾಟ ಮುಂದುವರೆಸೋಣ ಎಂದರು. ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಾ ಮಾತನಾಡಿ, ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ನ್ಯಾಯದೊರಕಿಸಿಕೊಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಸೌಜನ್ಯಾ ಕುಟುಂಬ ವರ್ಗದವರಿಗೆ ನ್ಯಾಯ ದೊರಕಿಸಿಕೊಡಲು ವಿವಿಧ ಸಂಘಟನೆಗಳು ಚನ್ನರಾಯಪಟ್ಟಣದಲ್ಲಿ ಜನತಾ ನ್ಯಾಯಾಲಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಸೌಜನ್ಯಾ ತಾಯಿ ಕುಸುಮಾ ಮಾತನಾಡಿ, ನನ್ನ ಮಗಳಿಗಾದ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಸರ್ಕಾರ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೈ ಮುಗಿದು ಕೇಳುತ್ತೇನೆ ಎಂದು ಗದ್ಗಗಿತರಾದರು. ಒಡನಾಡಿ ಸಂಸ್ಥೆಯ ಸ್ಟಾೃನ್ಲಿ ಮಾತನಾಡಿ, ಸಂಘಟನೆಗಳು ಯಾರ ವಿರುದ್ಧ ಹೋರಾಟ ಮಾಡುತ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಸೌಜನ್ಯಾ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ, ನಾರಾಯಣರೆಡ್ಡಿ, ಹೋರಾಟಗಾರ್ತಿ ರಮಾ, ರೈತ ಸಂಘದ ಮುಖಂಡ ದೊಡ್ಡೇರಿ ಶ್ರೀಕಂಠ, ಒಡನಾಡಿ ಸಂಸ್ಥೆಯ ಪರಶುರಾಮು, ವಿವಿಧ ಸಂಘಟನೆಗಳ ಮುಖಂಡರಾದ ಸಿ.ಎನ್. ಮಂಜುನಾಥ್, ಜಾವಿದ್ ಮಾತನಾಡಿದರು. ಗೋವಿಂದರಾಜು ದಿಂಡಗೂರು, ಜಭಿವುಲ್ಲಾ ಬೇಗ್, ಜಿ. ರಮೇಶ್, ಜಿ.ಎಸ್. ರಾಜ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net