

ಶೃಂಗೇರಿ: ಸೌಜನ್ಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಮರು ತನಿಖೆಯಾಗಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಶೃಂಗೇರಿ ತಾಲೂಕು ಕಚೇರಿಯಲ್ಲಿ ಕಂದಾಯ ಅಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, ಸೌಜನ್ಯಾ ಹತ್ಯೆ ಪ್ರಕರಣವನ್ನು ಮೊದಲು ತನಿಖೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಸೌಜನ್ಯಾ ಹತ್ಯೆ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತದೆ. ಹಾಗೆಯೇ ಅಮಾಯಕ ಸಂತೋಷ್ ರಾವ್ ಅವರನ್ನು 11 ವರ್ಷ ಸೆರೆಮನೆ ವಾಸ ಅನುಭವಿಸುವಂತೆ ಮಾಡಿದ್ದಾರೆ. ಬೆಳ್ತಂಗಡಿಯ ಒಂದೇ ತಾಲೂಕಿನಲ್ಲಿ 462 ಮಹಿಳೆಯರ ಕೊಲೆ ಪ್ರಕರಣ ನಡೆದಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಮರು ತನಿಖೆ ನಡೆಸಿ ಸೌಜನ್ಯಾ ಕುಟುಂಬಕ್ಕೆ ಮತ್ತು ಸಂತೋಷ್ ರಾವ್ ಅವರಿಗೆ ತಲಾ 25 ಲಕ್ಷ ರೂ. ಪರಿಹಾರ ಹಣ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಂದಾಯ ಅಧಿಕಾರಿ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು. ಪಪಂ ಅಧ್ಯಕ್ಷ ಹರೀಶ್ ಶೆಟ್ಟಿ, ಶ್ರೀರಾಮ ಸೇನೆಯ ಅರ್ಜುನ್, ಪ್ರವೀಣ್, ಸುರೇಶ್, ರವಿ ಸಂಜಯ್, ನಾಗೇಂದ್ರ, ಸುಜನ್, ಮೀನಾ ಶೆಟ್ಟಿ ಇದ್ದರು.