

ಚಳ್ಳಕೆರೆ: ಭಕ್ತಿ, ನಿಷ್ಠೆಗೆ ಹೆಸರಾದ ನಿಜಶರಣ ಅಂಬಿಗರ ಚೌಡಯ್ಯ ಅವರ ಬದುಕಿನ ಆದರ್ಶವನ್ನು ರೂಢಿಸಿಕೊಳ್ಳಬೇಕಿದೆ ಎಂದು ತಹಸೀಲ್ದಾರ್ ರೇಹಾನ್‌ಪಾಷಾ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಅಂಬಿಗರ ಚೌಡಯ್ಯ ಅವರ ವಚನಗಳಲ್ಲಿ ಲೋಕದ ಬದುಕಿನ ಮೌಲ್ಯಗಳಿವೆ. ಇತರರೊಂದಿಗೆ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬೇಕು ಎನ್ನುವುದನ್ನು ದೋಣಿ ನಡೆಸುವ ಕಾಯಕದಲ್ಲಿ ಕಂಡುಕೊಂಡಿದ್ದರು ಎಂದು ತಿಳಿಸಿದರು.
ಮುಖಂಡ ತಿಪ್ಪೇರುದ್ರಯ್ಯ ಮಾತನಾಡಿ, ಸಮಾಜದಲ್ಲಿ ಸಮಾನತೆ ಬಯಸಿದ ಅಂಬಿಗರ ಚೌಡಯ್ಯ ಆದರ್ಶವಾಗಿ ಬದುಕಿದವರು. ವಚನ ಸಾಹಿತ್ಯದಲ್ಲಿ ತಮ್ಮ ಅನುಭವಗಳನ್ನು ದಾಖಲು ಮಾಡಿದ್ದಾರೆ. ಜಾತಿ, ವರ್ಗ, ಅಸಮಾನತೆಯಿಂದ ಮನುಷ್ಯ ಮುಕ್ತವಾಗಬೇಕು ಎಂದು ಲೋಕಕ್ಕೆ ತಿಳಿಸಿದ್ದಾರೆ ಎಂದರು.
ಶಿವಾನಂದ, ತಿಪ್ಪೇಸ್ವಾಮಿ, ಮಾರುತಿ, ರಾಮಣ್ಣ, ನಾಗರಾಜ, ರವಿ, ಮಹೇಶ್, ಸುಮಲತಾ, ಶಾರದಮ್ಮ ಮತ್ತಿತರರು ಇದ್ದರು.