

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರಿ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಸಾಗಾಣಿಕೆ ವೆಚ್ಚದಲ್ಲಿ ಏರಿಕೆ ಕಾಣುವ ಮೂಲಕ ಅಗತ್ಯ ವಸ್ತುಗಳ ಬೆಲೆ ಸಹಜವಾಗಿಯೇ ಹೆಚ್ಚಲಿದೆ. ಹೀಗಾಗಿ ಸರ್ಕಾರದ ಕ್ರಮ ಖಂಡಿಸಿ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಶಕ್ತಿ ಯೋಜನೆ ಅನುಷ್ಠಾನದಿಂದ ಬಸ್ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದರಿಂದ ಪರ ಊರಿಗೆ ಹೋಗಿ ಕಲಿಯುವ ವಿದ್ಯಾಥಿರ್ಗಳಿಗೆ ಅತೀವ ತೊಂದರೆಯಾಗಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ವಸತಿ ನಿಲಯಗಳ ಸಂಖ್ಯೆ ಕಡಿಮೆ ಇರುವ ಕಾರಣ ಮಕ್ಕಳಿಗೆ ಪ್ರವೇಶ ಸಿಗದಂತಾಗಿದೆ. ಹೊಸ ಹಾಸ್ಟೆಲ್ಗಳ ನಿರ್ಮಾಣ, ಸದ್ಯದ ಹಾಸ್ಟೆಲ್ಗಳ ದುರಸ್ತಿಗೆ ಕ್ರಮಕೈಗೊಳ್ಳಬೇಕು. ಆಹಾರ ಧಾನ್ಯಗಳ ದರ ಹೆಚ್ಚಳವಾಗುತ್ತಿದೆ. ಜೀವನ ನಿರ್ವಹಣೆ ದುಸ್ತರವಾಗುತ್ತಿರುವುದರಿಂದ ಗ್ರಾಮೀಣ ಜನರು ಮಹಾನಗರಗಳಿಗೆ ಗುಳೆ ಹೋಗುವುದು ಹೆಚ್ಚಾಗುತ್ತಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮುಖಂಡ ಮಂಜುನಾಥ ಹಗೇದಾರ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಬಲಪಡಿಸಲು ಹಿರಿಯರು ನಿರ್ಧರಿಸಿದ್ದು, ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಮಾರ್ಗದರ್ಶನದಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗುವುದು. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಹೋರಾಟ ನಡೆಸಲಾಗುವುದು ಎಂದರು.