

ಕುಶಾಲನಗರ: ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೋಮವಾರಪೇಟೆ ತಾಲೂಕು ಇವರ ವತಿಯಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರೈಕೆಯಾಗುವ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು ತಯಾರಿಸುವ ಎಂ.ಎಸ್.ಪಿ.ಸಿ ಸಂಸ್ಥೆಯ ಸದಸ್ಯರುಗಳಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ ಕೂಡಿಗೆಯಲ್ಲಿರುವ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಭಾಂಗಣದಲ್ಲಿ ನಡೆಯಿತು.
ತರಬೇತಿಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೇವಿ.ಬಿ.ಮುಧೋಳ ಅವರು ಚಾಲನೆ ನೀಡಿದರು. ಜಿಲ್ಲೆಯ ಆಹಾರ ಸುರಕ್ಷತೆ ವಿಭಾಗದ ನಿಯೋಜಿತ ಅಧಿಕಾರಿ ಎ.ಐ.ಮಂಜುನಾಥ ಅವರು ಎಂ.ಎಸ್.ಪಿ.ಸಿ ಮತ್ತು ಎ.ಡಬ್ಲ್ಯೂಸಿ ಯಲ್ಲಿ ಆಹಾರ ಗುಣಮಟ್ಟ ಕಾಯ್ದೆ ಅಡಿ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು ನಿರ್ವಹಣೆಯ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು. ಕುಶಾಲನಗರ ಆರೋಗ್ಯ ಇಲಾಖೆಯ ಮಕ್ಕಳ ತಜ್ಞ ಡಾ.ಶಿವಕುಮಾರ್ ಅವರು, ಬಾಣಂತಿಯರು ಮತ್ತು ಮಕ್ಕಳ ಪೌಷ್ಟಿಕ ಆಹಾರದ ಬಗ್ಗೆ ತರಬೇತಿ ನೀಡಿದರು.
ಮೈಸೂರಿನ ವಿಭಾಗೀಯ ಪ್ರತಾಗಾರ ಕಛೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ ಅವರು ಕಛೇರಿಯ ಪತ್ರಗಳ ರೆಕಾರ್ಡ್ ರೂಮಿನ ನಿರ್ವಹಣೆ ಮಾಹಿತಿ ಬಗ್ಗೆ ತರಬೇತಿಯನ್ನು ನೀಡಿದರು. ತರಬೇತಿ ಕಾರ್ಯಾಗಾರದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಬಿ.ಮುಧೋಳ, ಮೇಲ್ವಿಚಾರಕಿ ಸಾವಿತ್ರವ್ವಾ, ಇಲಾಖೆಯ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತೆಯರು, ಎಂ.ಎಸ್.ಪಿಸಿ. ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.