ಮ್ಯಾನುಯಲ್ ಸ್ಕಾೃವೆಂಜರ್’ಗಳಿಗೆ ಪುನರ್ವಸತಿ : ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ

Lakshmikanth-reddy-1-
Published on

ಮೈಸೂರು: ಮ್ಯಾನುಯಲ್ ಸ್ಕಾೃವೆಂಜರ್ ಪದ್ಧತಿ ನಿಷೇಧಿಸಲಾಗಿದ್ದು, ಈ ಹಿಂದೆ ಈ ಕೆಲಸ ಮಾಡುತ್ತಿದ್ದವರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಕೆಲವರಿಗೆ ಜಾಗ ನೀಡಿ ಹಕ್ಕುಪತ್ರ ನೀಡುವುದು ಬಾಕಿ ಇದ್ದು, ಅಂತಹವರಿಗೆ ಸೌಲಭ್ಯ ಕಲ್ಪಿಸಲು ಅಗತ್ಯ ಜಾಗ ಗುರುತಿಸಿ ಎಂದು ಸಂಬಂ ಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮ್ಯಾನುಯಲ್ ಸ್ಕಾೃವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಸಂಬಂಧ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಬ್ಬಾಳು ಕಾಲೋನಿಯಲ್ಲಿ ಸಫಾಯಿ ಕರ್ಮಚಾರಿಗಳ ಆದಿ ದ್ರಾವಿಡ ಸಮುದಾಯಕ್ಕೆ ಸಮುದಾಯ ಭವನ ನಿರ್ಮಿಸಲು 2 ಎಕರೆ ಜಾಗವನ್ನು ಒಂದು ತಿಂಗಳೊಳಗೆ ಗುರುತಿಸಿ ನೀಡಬೇಕು ಎಂದು ನಗರ ಪಾಲಿಕೆಗೆ ಸೂಚನೆ ನೀಡಿದರು.

ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದಲ್ಲಿ 50 ವರ್ಷಗಳಿಂದ ಕಾಲೋನಿಯಲ್ಲಿ ವಾಸವಿರುವವರಿಗೆ ಜಾಗಕ್ಕೆ ಹಕ್ಕು ಪತ್ರ ನೀಡಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಬೇಕು. ಅದೇ ರೀತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಯಲ್ಲಿ ಮ್ಯಾನುಯಲ್ ಸ್ಕಾೃವೆಂಜರ್‌ಗಳಿಗೆ ಆದ್ಯತೆ ನೀಡಬೇಕು ಎಂದು ಸಮಿತಿಯ ಸದಸ್ಯರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಆದ್ಯತೆ ನೀಡಿ ನಿಯಮಾನುಸಾರ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮ್ಯಾನುಯಲ್ ಸ್ಕಾೃವೆಂಜರ್‌ಗಳೆಂದು ಗುರುತಿಸಲ್ಪಟ್ಟವರ 8ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಟ್ಯಾಬ್ ವಿತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇವರ ಪುನರ್ವಸತಿ ಯೋಜನೆಯಡಿ ಮಕ್ಕಳಿಗೆ ಶಾಲೆಯ ಶುಲ್ಕ ಭರಿಸಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಗಾಯತ್ರಿ ಮಾತನಾಡಿ, ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಮನುಗನಹಳ್ಳಿ ಗ್ರಾಮದಲ್ಲಿ ವಾಸವಿರುವ ಸ್ವಚ್ಛತಾ ಕಾರ್ಮಿಕರು ವಾಸವಿರುವ ಜಾಗದ ದಾಖಲೆಗಳು ಖಾಸಗಿ ವ್ಯಕ್ತಿಯ ಹೆಸರಿನಲ್ಲಿ ಇದೆ. ಈ ಸಂಬಂಧ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಕಾರ ಪಡೆಯುವಂತೆ ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net