

ಬೀಳಗಿ: ಗ್ರಾಮೀಣ ಭಾಗದಲ್ಲಿ 50 ವರ್ಷಗಳ ಇತಿಹಾಸ ಹೊಂದಿರುವ ಶರಿಗೇರಿ ಕ್ರೀಡೆ ಇಂದಿನ ದಿನದಲ್ಲಿ ನಶಿಸುತ್ತಿದ್ದು, ಇದರ ಪುನಃಶ್ಚೇತನ ಅತ್ಯಗತ್ಯವಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.
ತಾಲೂಕು ಗೆಳೆಯರ ಬಳಗದಿಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಶರಿಗೇರಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ತವರೂರಾಗಿರುವ ಬೀಳಗಿ ತಾಲೂಕಿನಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಶರಿಗೇರೆ ಕ್ರೀಡೆಯು ಹಿಂದಿನ ವೈಭವದಿಂದ ಯುವ ಪೀಳಿಗೆಗೆ ಪರಿಚಯವಾಗಲಿ ಎಂದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಹಳ್ಳಿಯಲ್ಲಿ ಮೊದಲು ಶರಿಗೇರಿ, ಕುಟಾಂಟ, ಕಬ್ಬಡಿ ನಡೆಯುತ್ತಿದ್ದವು. ಅದರಲ್ಲಿ ಶರಿಗೇರಿ ಕ್ರೀಡೆ ಕಳೆದ ಐದು ದಶಕಗಳಿಂದ ನಶಿಸಿ ಹೋಗುತ್ತಿದ್ದು, ಅದನ್ನು ರಾಜ್ಯಮಟ್ಟಕ್ಕೆ ಪರಿಚಯಿಸಬೇಕು. ಇದಕ್ಕೆ ಕ್ರೀಡಾ ಇಲಾಖೆ ಬೆಂಬಲ ನೀಡಬೇಕು ಎಂದರು.
ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಜಮ್ ಶುಗರ್ಸ್ ನಿರ್ದೇಶಕ ರಾಮನಗೌಡ ಜಕ್ಕನಗೌಡ, ಸತ್ಯಪ್ಪ ಮೇಲ್ನಾಡ, ಅಣವೀರಯ್ಯ ಪ್ಯಾಟಿಮಠ, ಹಣಮಂತ ಕಾಖಂಡಕಿ, ಶ್ರೀಶೈಲ ಸೂಳಿಕೇರಿ, ಶ್ರೀಶೈಲ ಅಂಟಿನ, ಬಸವರಾಜ ಹಳ್ಳದಮನಿ, ಯಮನಪ್ಪ ರೊಳ್ಲಿ, ಸಿದ್ದು ಮಾದರ, ಹಣಮಂತ ಸೂಳಿಕೇರಿ, ಸಿದ್ದು ಸಾರಾವರಿ, ಚಿದಾನಂದ ನಂದ್ಯಾಳ ಮತ್ತಿತರರಿದ್ದರು.