ನದಿ ಪಾತ್ರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ: ಜಾಸೀರ್

jaasir
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ದಡದಲ್ಲಿ ನೂರಾರು ಬಡ ಕುಟುಂಬಗಳು ಜೀವನ ನಡೆಸಿತ್ತಿದ್ದಾರೆ. ಇವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕೆಂದು ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಜಾಸೀರ್ ಮೂರ್ನಾಡು ಒತ್ತಾಯ ಮಾಡಿದ್ದಾರೆ.


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದು ನದಿ ಪಾತ್ರದ ನಿವಾಸಿಗಳು ಜೀವನ ನಡೆಸುತ್ತಿದ್ದಾರೆ. ಪ್ರವಾಹದ ಭೀತಿಯಲ್ಲಿ ಪ್ರತೀ ವರ್ಷ ಮನೆ ಖಾಲಿ ಮಾಡುತ್ತಿದ್ದಾರೆ. ೨೦೧೮ ರಲ್ಲಿ ಪ್ರಕೃತಿ ವಿಕೋಪದಲ್ಲಿ ಸೂರು ಕಳೆದುಕೊಂಡವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೂರು ಒದಗಿಸಿದ್ದರು. ಆದರೆ, ೨೦೧೯ ರಲ್ಲಿ ಕಾವೇರಿ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಜಾಗವನ್ನು ಗುರುತಿಸುವ ಕೆಲಸ ಕಳೆದ ನಾಲ್ಕು ವರ್ಷಗಳಲ್ಲಿ ಈ ಹಿಂದಿನ ಸರ್ಕಾರ ಮಾಡದೇ ಸಂತ್ರಸ್ತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದ್ದಾರೆ.


ನದಿ ತೀರದ ನಿವಾಸಿಗಳು ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಮತ್ತು ಕೊಂಡಂಗೇರಿ ಗ್ರಾಮದ ನದಿ ತೀರದಲ್ಲಿ ವಾಸಿಸುವ ಬಡವರಿಗೆ ಸರ್ಕಾರ ಸೂಕ್ತ ಪುನರ್ವಸತಿ ಕಲ್ಪಿಸಬೇಕಾಗಿದೆ. ಪ್ರತೀ ಬಾರಿ ಮಳೆಗಾಲದಲ್ಲಿ ನದಿ ತೀರದ ಮನೆಗಳಿಗೆ ನೀರು ನುಗ್ಗಿ ಸಂತ್ರಸ್ತರು ಬೀದಿಗೆ ಬರುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕೇವಲ ಸಂತ್ರಸ್ತರಿಗೆ ಸಾಂತ್ವನದ ಮಾತುಗಳನ್ನಾಡಿ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ೨೦೧೯ ರಲ್ಲಿ ಉಂಟಾದ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಆದಷ್ಟು ಬೇಗ ಸೂರು ನಿರ್ಮಿಸಿಕೊಡಬೇಕು. ಇದರ ಬಗ್ಗೆ ಜಿಲ್ಲೆಯ ನೂತನ ಶಾಸಕರು ಮುತುವರ್ಜಿವಹಿಸಬೇಕಾಗಿದೆ ಎಂದು ಜಾಸೀರ್ ಮೂರ್ನಾಡು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net