

ಬೆಂಗಳೂರು: ಮಾದಕ ವಸ್ತು ಮಾರಾಟದಲ್ಲಿ ಭಾಗಿಯಾಗಿದ್ದ ವ್ಯಸನಮುಕ್ತಿ ಕೇಂದ್ರದ ಮುಖ್ಯಸ್ಥನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ ನಗರದ ನಿವಾಸಿ ಸುಹಾಸ್ಗೌಡ ಅಲಿಯಾಸ್ ಸೂರಜ್ಗೌಡ (32) ಬಂಧಿತ ಆರೋಪಿ. ಬಂಧಿತನಿಂದ 11.3 ಗ್ರಾಂ ಎಂಡಿಎಂಎ, 3.5 ಗ್ರಾಂ ಎಕ್ಸ್ಟೆಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತನು ಹೊಸಕೆರೆಹಳ್ಳಿಯ ಕಾಲೇಜ್ ಒಂದರ ಬಳಿ ಡ್ರಗ್ಸ್ ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಕೆಂಗೇರಿಯಲ್ಲಿರುವ ಪೂರ್ಣ ಪ್ರಜ್ಞಾ ಫೌಂಡೇಷನ್ ಹೆಸರಿನಲ್ಲಿ ಮದ್ಯ ಮತ್ತು ಮಾದಕವಸ್ತು ವ್ಯಸನಮುಕ್ತಿ ಕೇಂದ್ರವನ್ನು ನಡೆಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈತ ಅವಿವಾಹಿತನಾಗಿದ್ದು, ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಸೇರುತ್ತೇನೆ ಇದಕ್ಕಾಗಿ ನನಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ ಮನೆಯವರನ್ನು ನಂಬಿಸಿದ್ದ. ಮನೆಯವರು ಸುಮಾರು 40 ಲಕ್ಷ ರೂ. ಸಾಲ ಮಾಡಿಕೊಟ್ಟಿದ್ದರು. ಈ ಹಣವನ್ನು ಮೋಜು ಮಸ್ತಿ ಮಾಡಿದ್ದ ಕಳೆದಿದ್ದ. ಇದರಿಂದ ಮನೆಯವರು ಈತನನ್ನು ಹೊರಗೆ ಹಾಕಿದ್ದರು.
ಹೈಫೈ ಹೋಟೆಲ್ಗಳಲ್ಲಿ ಉಳಿದುಕೊಳ್ಳುತ್ತಿದ್ದ ಆರೋಪಿಯೂ ಸದಾ ಗಾಂಜಾ ಸೇದಿಕೊಂಡು ಇರುತ್ತಿದ್ದ. ವ್ಯಸನವನ್ನು ಬಿಡಲೆಂದು ಮದ್ಯ ಮತ್ತು ಮಾದಕವಸ್ತು ವ್ಯಸನ ಮುಕ್ತಿ ಕೇಂದ್ರಕ್ಕೆ ಬಂದವರಿಗೆ ವ್ಯಸನ ಇರುವುದನ್ನೆ ಬಂಡವಾಳ ಮಾಡಿಕೊಂಡಿದ್ದ ಆರೋಪಿ ಅಲ್ಲಿ ದಾಖಲಾಗುವವರಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಸುಹಾಸ್ ಸುಮಾರು 6 ವರ್ಷಗಳ ಕಾಲ ಕೆಂಗೇರಿಯಲ್ಲಿರುವ ಪೂರ್ಣ ಪ್ರಜ್ಞಾ ಫೌಂಡೇಷನ್ನಲ್ಲಿ ಮದ್ಯ ಮತ್ತು ಮಾದಕವಸ್ತು ವ್ಯಸನಮುಕ್ತಿ ಕೇಂದ್ರದಲ್ಲಿ ರೋಗಿಯಾಗಿ ದಾಖಲಾಗಿದ್ದ. ಅದರಿಂದ ಹೊರಗೆ ಬಂದ ನಂತರ ಅದೇ ಕೇಂದ್ರದ ಮೇಲೆ ಶೇ.25 ರಷ್ಟು ಹಣ ಹೂಡಿಕೆ ಮಾಡಿ ಅದರ ವ್ಯವಸ್ಥಾಪಕ ನಿರ್ದೇಶಕ(MD) ಆಗಿದ್ದ.
ಕಳೆದ ಎಂಟು ತಿಂಗಳ ಹಿಂದೆ ಸುಹಾಸ್ ಅವರ ತಂದೆ ತೀರಿಕೊಂಡಿದ್ದರು. ಈ ವೇಳೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಆರೋಪಿಯು ಕಳೆದ 6 ತಿಂಗಳಿನಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಮೈಸೂರಿಂದ ಡ್ರಗ್ಸ್ ತರಿಸುತ್ತಿದ್ದುದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಎಲ್ಲಿಂದ ಡ್ರಗ್ಸ್ ತರಿಸುತ್ತಿದ್ದ ಯಾರಿಗೆಲ್ಲಾ ಮಾರಾಟ ಮಾಡುತ್ತಿದ್ದ ಎಂಬುದನ್ನು ತನಿಖೆ ಕೈಗೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.