

ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದ ಫ್ಲೈ ಓವರ್ ಕಾಮಗಾರಿಯಿಂದ ಗೋಕುಲ ರಸ್ತೆ ನಾಲಾ ಬಳಿ ರಸ್ತೆ ಕಿರಿದಾಗಿದ್ದು, ಸಂಚಾರ ದಟ್ಟಣೆ ವಿಪರೀತವಾಗಿದೆ.
ಹೋಟೆಲ್ ಫೆರ್ನ್ (ಹಿಂದಿನ ಕ್ಲಾರ್ಕ್ಸ್ ಇನ್ ಹೋಟೆಲ್)ಬಳಿ ಫ್ಲೈಓವರ್ ಮಾರ್ಗವು ಇಳಿಜಾರಾಗಿ, ರಸ್ತೆಗೆ ಕೂಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಸಮ ಎತ್ತರದ ಪಿಲ್ಲರ್ಗಳ ಬದಲು ಚಿಕ್ಕದಾದ ಒಂದು ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇನ್ನೊಂದು ಚಿಕ್ಕ ಪಿಲ್ಲರ್ ನಿರ್ವಣಕ್ಕೆ ಜಾಗ ಗುರುತಿಸಿ ಬ್ಯಾರಿಕೇಡ್ ಹಾಕಲಾಗಿದೆ.
ಇದರಿಂದ ದ್ವಿಪಥ ರಸ್ತೆಯ ಮಧ್ಯದ ಬಹುದೊಡ್ಡ ಭಾಗ ಕಾಮಗಾರಿಗೆ ಒಳಪಟ್ಟಿದ್ದು, ರಸ್ತೆ ಕಿರಿದಾಗಿದೆ. ಒಂದೇ ಬಸ್ ಅಥವಾ ಲಾರಿ ಹಾದು ಹೋಗುವಷ್ಟು ಕಿರಿದಾಗಿರುವ ಮಾರ್ಗದಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗಿದೆ. ಎಂ.ಎಂ. ಜೋಶಿ ಆಸ್ಪತ್ರೆಯಿಂದ ಹೋಟೆಲ್ ಫೆರ್ನ್ವರೆಗೆ ದಿನವಿಡಿ ವಾಹನ ದಟ್ಟಣೆ ಉಂಟಾಗುತ್ತಿದೆ. ಮಧ್ಯಾಹ್ನ ಮತ್ತು ಸಂಜೆ ವೇಳೆ ಟ್ರಾಫಿಕ್ ಜಾಮ್ ಆಗುತ್ತಿರುತ್ತದೆ. ಗೋಕುಲ ರಸ್ತೆಯಲ್ಲಿ ವಿಮಾನ ನಿಲ್ದಾಣ, ಪ್ರಮುಖ ಆಸ್ಪತ್ರೆ ಹಾಗೂ ಮಾಲ್ಗಳು ಇರುವುದರಿಂದ ವಾಹನಗಳ ಸಂಚಾರ ಹೆಚ್ಚಿರುತ್ತದೆ.
ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ನಿಧಾನವಾಗಿ ಸಾಗಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕೆಲ ಮಾರ್ಗಗಳಲ್ಲಿ ಒಂದಿಷ್ಟು ದಿನ ಕೆಲಸ ನಡೆದರೆ, ಒಂದಿಷ್ಟು ದಿನ ಬಂದ್ ಇರುತ್ತದೆ. ಹೋಟೆಲ್ ಫೆರ್ನ್ ಬಳಿ ನಾಲಾ ಮೇಲೆ ಸೇತುವೆ ಇರುವುದರಿಂದ ರಸ್ತೆ ಅಗಲ ಮಾಡಲು ಸಾಧ್ಯವೇ ಇಲ್ಲ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವುದೊಂದೇ ಉಳಿದಿರುವ ಮಾರ್ಗ.
2021ರ ಜೂನ್ನಲ್ಲಿ ಕಾಮಗಾರಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, 2024ರ ಜೂನ್ನಲ್ಲಿ ಪೂರ್ಣಗೊಳ್ಳಬೇಕಿದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದನ್ನು ನೋಡಿದರೆ ಅಷ್ಟರೊಳಗೆ ಮುಗಿಯುವ ಸಾಧ್ಯತೆಗಳು ಕಡಿಮೆ.