

ಇಂಡಿ: ತಾಲೂಕಿನ ಆಳೂರ ಗ್ರಾಮದ ನಂದಿಬಸವೇಶ್ವರ ಪರ್ವ ಮಹೋತ್ಸವ ಅಂಗವಾಗಿ ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ ಲಚ್ಯಾಣ ಮತ್ತು ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಬುಧವಾರ ಆಯೋಜಿಸಲಾಗಿತ್ತು.
ಗ್ರಾಮದ ನೂರಾರು ಜನ ಬೆಳಗ್ಗೆಯಿಂದ ಬಸವೇಶ್ವರ ದೇವಸ್ಥಾನ ಮುಂದೆ ಸಾಲುಗಟ್ಟಿ ನಿಂತು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಬಿಎಲ್‌ಡಿಇ ಆಸ್ಪತ್ರೆ ವೈದ್ಯರ ತಂಡ ಜನರ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ನೀಡಿತು. ಕಣ್ಣಿನ ಪೊರೆ ಉಚಿತ ತಪಾಸಣೆ ನಡೆಸಿ, ಶಸ್ತ್ರ ಚಿಕಿತ್ಸೆ ಅಗತ್ಯವುಳ್ಳವರಿಗೆ ಆಸ್ಪತ್ರೆಗೆ ಬರುವಂತೆ ಸೂಚಿಸಲಾಯಿತು.
ಪಿಡಿಒ ಉಮೇಶ ಹೂಗಾರ ಮಾತನಾಡಿ, ಇಂದಿನ ಒತ್ತಡದ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲ ಒಂದು ವೈಪರೀತ್ಯ ಕಾಣುತ್ತಿದ್ದೇವೆ. ಪ್ರತಿಯೊಬ್ಬರು ಎರಡ್ಮೂರು ತಿಂಗಳಿಗೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದ ಆರೋಗ್ಯ ರಕ್ಷಣೆ ಜತೆಗೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದರು.
ರಾಧಾ ಕೌಲಗಿ ಮಾತನಾಡಿ, ನಮ್ಮ ದೃಷ್ಟಿ ನಾವು ಹೊಂದಿರುವ ಅತ್ಯಮೂಲ್ಯ ಆಸ್ತಿಗಳಲ್ಲಿ ಒಂದಾಗಿದೆ. ಕಣ್ಣಿನ ನಿರ್ಲಕ್ಷೃ ದೊಡ್ಡ ಅನಾನುಕೂಲತೆ ಉಂಟುಮಾಡಬಹುದು. ನಾವು ನಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಪಿಕೆಪಿಎಸ್ ಅಧ್ಯಕ್ಷ ರಾಜಶೇಖರ ನಾಟೀಕಾರ ಮಾತನಾಡಿ, ಕಣ್ಣು ಮಾನವನ ದೇಹದ ಅತಿ ಸೂಕ್ಷ್ಮವಾದ ಅಂಗ. ಇದನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಬಡ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಅನುಕೂಲವಾಗಿವೆ ಎಂದರು.
ಗ್ರಾಪಂ ಅಧ್ಯಕ್ಷೆ ಸುಮಿತ್ರಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಕಾರ್ಯದರ್ಶಿ ಎಸ್.ಆರ್. ನಿಂಬಾಳ, ಉಪಾಧ್ಯಕ್ಷೆ ನರಸಮ್ಮ ಚಾಬುಕಸವಾರ, ಸದಸ್ಯರಾದ ಬಸುಗೌಡ ಪಾಟೀಲ, ರಾಜು ಸಾಲೋಟಗಿ, ಗ್ರಾಮಸ್ಥರಾದ ಪಾಂಡುರಂಗ ಕುಲಕರ್ಣಿ, ರಾಮನಗೌಡ ಪಾಟೀಲ, ಹೊನ್ನಪ್ಪಗೌಡ ಪಾಟೀಲ, ಸಂತೋಷ ಸದಲಾಪುರ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಡಾ. ಅನೀಲ ರಾಠೋಡ, ಸಂಜೀವ ಅಂಕಲಗಿ, ಎಂ.ಎಫ್. ಅಥರ್ಗಾ, ಮಾಲಾಶ್ರೀ ಕೊಲಾರ, ಪಲ್ಲವಿ ಗೋಟ್ಯಾಳ, ಶ್ವೇತಾ ಪಾಟೀಲ, ವಿಜಯಲಕ್ಷ್ಮೀ ಪೂಜಾರಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿದ್ದರು. ಶಿಬಿರದಲ್ಲಿ 220 ಜನರ ಕಣ್ಣು ತಪಾಸಣೆ ಮಾಡಲಾಯಿತು.