

ಅರಸೀಕೆರೆ: ನಿಯಮಿತ ರಕ್ತದಾನ ಆರೋಗ್ಯ ರಕ್ಷಣೆಗೆ ಪೂರಕ ಎಂದು ಪ್ರಾಂಶುಪಾಲ ಕೆ.ಎಂ.ಸಂತೋಷ್ ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನ ಅಂಗವಾಗಿ ತಾಲೂಕಿನ ರಂಗಾಪುರ ಕಾವಲು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಪ್ರಸಾದ್ ನೇತ್ರಾಲಯ ಹಾಗೂ ಗಂಡಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯವಂತ ಯುವಕ, ಯುವತಿಯರು ವೈದ್ಯರ ಸಲಹೆ, ಸೂಚನೆಯಂತೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಎದುರಾಗದು. ಬದಲಾಗಿ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯ ಜೀವ ಉಳಿಸಲು ನೆರವಾಗುತ್ತದೆ ಎಂಬುದನ್ನು ಮರೆಯಬಾರದು. ಶಾಲೆ ವತಿಯಿಂದ ಉಚಿತ ರಕ್ತದಾನ, ಕಣ್ಣು ಮತ್ತು ದಂತ ತಪಾಸಣಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಬೆಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇದಾನಂದಮೂರ್ತಿ ಮಾತನಾಡಿ, ಶಿಕ್ಷಕರು, ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಪಾಲಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಶಾಲಾ ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದ ವಿಜ್ಞಾನದ ವಿವಿಧ ಪ್ರಾತ್ಯಕ್ಷಿಕೆಗಳು ಹಾಗೂ ರಂಗೋಲಿ ಚಿತ್ರಗಳು ನೋಡುಗರ ಗಮನ ಸೆಳೆಯಿತು. ರಾಜ್ಯ ವಸತಿ ಶಾಲಾ ನೌಕರರ ಸಂಘದ ಅಧ್ಯಕ್ಷ ಪಿ.ಎನ್.ರವಿಚಂದ್ರ, ಹಸಿರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಯಣ್ಣ, ಜಿಲ್ಲಾಧ್ಯಕ್ಷೆ ಉಷಾ, ಡಾ.ರಜಿನಿ, ಡಾ.ಸೌಮ್ಯಾ, ಮಧು, ಕಲ್ಪನಾ , ಕುಮಾರ್, ದಯಾನಂದ್, ರವಿ ಡಿ.ಕಾಳೆ ಇತರರಿದ್ದರು.