ಬಾಲನ್ಯಾಯ ಕಾಯ್ದೆಯಡಿ ನೋಂದಣಿ ಕಡ್ಡಾಯ

Sabhe
Published on

ಧಾರವಾಡ: ಮಕ್ಕಳ ಪಾಲನೆ, ಪೋಷಣೆ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಕಾರ್ಯ ನಿರತವಾಗಿರುವ ಸಂಘ-ಸಂಸ್ಥೆಗಳು ಬಾಲನ್ಯಾಯ ಕಾಯ್ದೆ ಅಡಿ ನೋಂದಣಿ ಆಗಬೇಕು. ಸರ್ಕಾರದ ಅನುದಾನ ಪಡೆಯದಿದ್ದರೂ ನೋಂದಣಿ ಕಡ್ಡಾಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ಹಕ್ಕು ರಕ್ಷಣೆ, ಸೌಲಭ್ಯ ನೀಡಿಕೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಂದಣಿಯೇತರ ಸಂಸ್ಥೆಗಳು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು. ಎಚ್‌ಐವಿ, ಸೋಂಕಿತ ತಂದೆ- ತಾಯಿಯ ಮಕ್ಕಳಿಗಾಗಿ ಜಾರಿ ಆಗಿರುವ ವಿಶೇಷ ಪಾಲನಾ ಯೋಜನೆ, ಏಕಪೋಷಕ ಮಕ್ಕಳಿಗಾಗಿ ಇರುವ ಪ್ರಾಯೋಜಕತ್ವ ಯೋಜನೆ, ಉಪಕಾರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎ್. ದೊಡ್ಡಮನಿ ಮಾತನಾಡಿ, 8 ತಿಂಗಳ ಹಿಂದೆ ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗ್ರಾಮೀಣ ಭಾಗದ ಸುಮಾರು 30ಕ್ಕೂ ಹೆಚ್ಚು ಶಾಲಾ ಕಟ್ಟಡಗಳ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ನೆಲಸಮಗೊಳಿಸಲು ವರದಿ ನೀಡಿದರು. ಆದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಕರ್ತವ್ಯಲೋಪ ಎಸಗಿದ್ದಾರೆ. ಈ ಬಗ್ಗೆ ಹೈಕೋರ್ಟ್‌ಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಡಿವೈಎಸ್‌ಪಿ ಸಂಗಮೇಶ ಹಿರೇಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಶಸಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ ಜಿ., ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ನೀತಾ ವಾಡಕರ್, ಮಕ್ಕಳ ಕಲ್ಯಾಣ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net