ಕಾರ್ಮಿಕ ಇಲಾಖೆಯಲ್ಲಿ ವ್ಯಾಪಾರದಂಗಡಿಗಳ ನೋಂದಣಿ ಕಡ್ಡಾಯ

4
Published on

ಆರ್.ಕೃಷ್ಣ ಮೈಸೂರು
ವ್ಯಾಪಾರ, ವಹಿವಾಟು ನಡೆಸುವ ಅಂಗಡಿ ಮಾಲೀಕರು ಕಾರ್ಮಿಕ ಇಲಾಖೆಯಲ್ಲಿಯೂ ನೋಂದಣಿ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.
ಒಂದೊಮ್ಮೆ ನೋಂದಣಿ ಮಾಡಿಸಿಕೊಳ್ಳದಿದ್ದರೆ ಅಂತಹ ಅಂಗಡಿಗಳ ವಿರುದ್ಧ ಕಾರ್ಮಿಕ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳುವ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಿದ್ದಾರೆ. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರಡಿ ವ್ಯಾಪಾರ, ವಹಿವಾಟು ನಡೆಸುವ ಪ್ರತಿಯೊಬ್ಬ ವರ್ತಕ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಪರವಾನಗಿ ಪಡೆದಿದ್ದರೂ ಕಾರ್ಮಿಕ ಇಲಾಖೆಯಲ್ಲಿಯೂ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಆದರೆ ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಾರ ಮಾಡುವ ಕೆಲವರು ನೋಂದಣಿ ಮಾಡಿಸಿಕೊಂಡಿದ್ದರೂ 30 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು ಇನ್ನು ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳದೆ ವ್ಯಾಪಾರ-ವಹಿವಾಟು ನಡೆಸುವ ವ್ಯಾಪಾರಸ್ಥರ ವಿರುದ್ಧ ಸಮರ ಸಾರಲು ಕಾರ್ಮಿಕ ಇಲಾಖೆ ಮುಂದಾಗಿದೆ.
ಎಲ್ಲ ವ್ಯಾಪಾರಸ್ಥರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತರುವುದು ಇಲಾಖೆ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನೋಂದಣಿ ಮಾಡಿಸಿಕೊಳ್ಳದೆ ವ್ಯಾಪಾರ ನಡೆಸುತ್ತಿರುವ ವರ್ತಕರ ಪತ್ತೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ವರ್ತಕರ ಸಂಘಟನೆಗಳ ಮೊರೆ ಹೋಗಿದ್ದಾರೆ.

ಕ್ರಿಮಿನಲ್ ಕೇಸ್ ದಾಖಲು
ನೋಂದಣಿ ಮಾಡಿಸಿಕೊಳ್ಳದೆ ಇರುವ ವರ್ತಕರಿಗೆ ಎಚ್ಚರಿಕೆಯ ನೋಟಿಸ್ ನೀಡುವುದರೊಂದಿಗೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ಬಗ್ಗೆ ನಿರಂತರವಾಗಿ ತಪಾಸಣೆ ನಡೆಸುತ್ತಿರುವ ಕಾರ್ಮಿಕ ಇಲಾಖೆ ಇದುವರೆಗೆ 2000 ಸಾವಿರಕ್ಕೂ ಹೆಚ್ಚು ವರ್ತಕರಿಗೆ ನೋಟಿಸ್ ನೀಡಿದ್ದು, 134 ಜನರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ.
ಸಂಘಟನೆಗಳ ನೆರವು: ವ್ಯಾಪಾರ-ವಹಿವಾಟು ನಡೆಸುವ ಪ್ರತಿಯೊಬ್ಬರು ತಮ್ಮದೇ ಆದ ಸಂಘಟನೆಗಳನ್ನು ಮಾಡಿಕೊಂಡಿರುವುದರಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಘಟನೆಗಳ ಮೂಲಕ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಸಂಘಟನೆಯಲ್ಲಿ ಸದಸ್ಯರಾಗಿರುವ ವರ್ತಕರ ವಿವರ ಪಡೆದು ನೋಂದಣಿ ಆಗಿದ್ದಾರೆಯೋ, ಇಲ್ಲವೋ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇದರೊಂದಿಗೆ ಸ್ಥಳೀಯ ಸಂಸ್ಥೆ ಸೇರಿದಂತೆ ಸೆಸ್ಕ್, ಕಾನೂನು ಮತ್ತು ಅಳತೆ ಮಾಪನಶಾಸ್ತ್ರ ಇಲಾಖೆಯಲ್ಲಿ ನೋಂದಣಿ ಆಗಿರುವ ವರ್ತಕರ ವಿವರವನ್ನು ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಈ ಮೂಲಕ ಎಲ್ಲ ವ್ಯಾಪಾರಸ್ಥರ ಪಟ್ಟಿಯನ್ನು ಪಡೆದು ಅವರನ್ನು ಇನ್ನು ಆರು ತಿಂಗಳಲ್ಲಿ ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿ ತರಲು ಯೋಜನೆ ರೂಪಿಸಲಾಗಿದೆ.

ಇಲಾಖೆಯಲ್ಲಿ ನೋಂದಣಿ:
ಕಾರ್ಮಿಕ ಇಲಾಖೆಯಲ್ಲಿ ಇದುವರೆವಿಗೂ 6232 ಅಂಗಡಿಗಳು, 7669 ವಾಣಿಜ್ಯ ಸಂಸ್ಥೆಗಳು ನೋಂದಣಿ ಆಗಿದೆ. ಒಟ್ಟು 13,901 ವ್ಯಾಪಾರಸ್ಥರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದು, ಇನ್ನೂ 30 ಸಾವಿರಕ್ಕೂ ಹೆಚ್ಚು ವರ್ತಕರ ನೋಂದಣಿ ಕಾರ್ಮಿಕ ಇಲಾಖೆಯ ಮುಂದಿದೆ.

ನೋಂದಣಿ ಹೇಗೆ ?
ವ್ಯಾಪಾರ, ವಹಿವಾಟು ನಡೆಸುವ ವರ್ತಕರು ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಯಲ್ಲಿ ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಂಡಂತೆ ಕಾರ್ಮಿಕ ಇಲಾಖೆಯಲ್ಲಿಯೂ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ವರ್ತಕರು ತಮ್ಮ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಬಹುದು. ಇಲ್ಲದಿದ್ದರೆ ಠಿಠಿ://ಡಿಡಿಡಿ.ಛಿಚ್ಟಞಜಿ.ಚ್ಟ್ಞಠಿ.ಜಟ.ಜ್ಞಿ/ಛಿಚ್ಟಞಜಿ/ಠಿಠಿಜ್ಚಿ/ಟಞಛಿ.ಟ್ಡ ಮೂಲಕ ಲಾಗಿನ್ ಅಗಿ ನೋಂದಣಿ ಆಗಬಹುದು.

ಕಡ್ಡಾಯವಾಗಿ ನೋಂದಣಿ ಮಾಡಿಸಿ
ನಗರ ಸೇರಿದಂತೆ ಜಿಲ್ಲೆಯ ಎಲ್ಲ ಅಂಗಡಿಗಳ ವ್ಯಾಪಾರಸ್ಥರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಇನ್ನೂ 30 ಸಾವಿರಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಳ್ಳಬೇಕಿದ್ದು, ತಕ್ಷಣ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಇಲ್ಲವೇ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರಕರಣ ದಾಖಲಿಸಲಾಗುವುದು.
ರಾಜೇಶ್ ಕೆ.ಜಾಧವ್
ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net