ರಾಗಿ ಖರೀದಿ ನೋಂದಣಿ ಸುಸೂತ್ರ!

ರಾಗಿ ಖರೀದಿ ನೋಂದಣಿ
ರಾಗಿ ಖರೀದಿ ನೋಂದಣಿ
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಹಲವು ನ್ಯೂನತೆಗಳ ನಡುವೆ ಕಡೆಗೂ ರಾಗಿ ಖರೀದಿ ನೋಂದಣಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಮೊದಲ ದಿನವೇ 100ಕ್ಕೂ ಹೆಚ್ಚು ರೈತರು ಬೆರಳಚ್ಚು ನೀಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ರೈತರಿಂದ ರಾಗಿ ಖರೀದಿಯಲ್ಲಿ ಪಾರದರ್ಶಕತೆ ಜತೆಗೆ ಲೋಪದೋಷ ತಡೆಗಟ್ಟುವ ಸಲುವಾಗಿ ಪ್ರಸಕ್ತ ಸಾಲಿನ ರಾಗಿ ಖರೀದಿ ನೋಂದಣಿ ಪ್ರಕ್ರಿಯೆಗೆ ಬೆರಳಚ್ಚು ತಂತ್ರಜ್ಞಾನ ಆರಂಭಿಸಲಾಗಿದೆ. ಈ ಮೂಲಕ ಪಹಣಿಯಲ್ಲಿ ಹೆಸರಿರುವ ರೈತರೇ ಆಗಮಿಸಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ ಇದರಲ್ಲಿ ತಾಂತ್ರಿಕ ದೋಷ ಎದುರಾಗಿದ್ದರಿಂದ ಪ್ರಕ್ರಿಯೆ ವಿಳಂಭವಾಗಿತ್ತು ಎನ್ನಲಾಗಿದೆ. ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ಮಾಡಲು ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ದೋಷ ಸರಿಪಡಿಸುವಲ್ಲಿ 15 ದಿನದಿಂದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹರಸಾಹಸ ಪಟ್ಟಿತ್ತು. ಇದೀಗ ತಾಂತ್ರಿಕ ಸಮಸ್ಯೆ ಸರಿಹೋಗಿದ್ದು ರಾಗಿ ನೋಂದಣಿ ಪ್ರಕ್ರಿಯೆ ಸೂಸುತ್ರವಾಗಿ ಆರಂಭವಾಗಿದೆ.
60 ಲಕ್ಷ ಕ್ವಿಂಟಲ್ ಖರೀದಿ ಗುರಿ:
ಪ್ರಸ್ತುತ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದಿರುವ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೊಟ್ಸ್ ಐಡಿ ಕಡ್ಡಾಯ. ಈ ಬಾರಿ ಎಲ್ಲ ರೈತರಿಂದ ಒಂದು ಎಕರೆಗೆ 10 ಕ್ವಿಂಟಲ್ ನಂತೆ ಪ್ರತಿ ಕ್ವಿಂಟಾಲ್ ರಾಗಿಗೆ 13,846 ರೂಪಾಯಿ ನಿಗದಿಮಾಡಿ ರೈತರು ಹೊಂದಿರುವ ಜಮೀನಿಗೆ ಅನುಸಾರವಾಗಿ ರಾಗಿ ಖರೀದಿಸಲಾಗುತ್ತಿದೆ. ಈ ವರ್ಷ ರಾಜ್ಯದಲ್ಲಿ 60 ಲಕ್ಷ ಕ್ವಿಂಟಾಲ್ ರಾಗಿ ಖರೀದಿ ಗುರಿ ಹೊಂದಲಾಗಿದೆ. ಈ ಗುರಿ ಮುಟ್ಟುವವರಿಗೆ ರಾಗಿ ಖರೀದಿ ನೋಂದಣಿ ನಡೆಯಲಿದೆ ಎಂದು ಅಹಾರ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ವರದಿ ಪರಿಣಾಮ
ಡಿ.1ರಿಂದಲೇ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿತ್ತು. ಆದರೆ ಡಿಸೆಂಬರ್‌ನಲ್ಲಿ ಎರಡು ವಾರ ಕಳೆದರೂ ನೋಂದಣಿ ಪ್ರಕ್ರಿಯೆ ಆರಂಭವಾಗದಿರುವುದು ರೈತಾಪಿ ವರ್ಗದಲ್ಲಿ ಗೊಂದಲ ಮೂಡಿಸಿದ ಕುರಿತು ವಿಜಯವಾಣಿ ಡಿ.14ರಂದು ‘ರಾಗಿ ಖರೀದಿ ನೋಂದಣಿ ಇನ್ನೂ ಕಗ್ಗಂಟು’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ವಿಳಂಭವಾಗುತ್ತಿರುವುದರಿಂದ ರೈತಾಪಿ ವರ್ಗ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆಗೆ ಸಜ್ಜಾಗುತ್ತಿರುವ ಬಗ್ಗೆ ಸುಳಿವು ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net