

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲಾದ್ಯಂತ ಮಾ.3ರಿಂದ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ಇದುವರೆಗೆ 25089 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಖರೀದಿ ಪ್ರಕ್ರಿಯೆ ಅರಂಭದಲ್ಲಿ ಕೆಲವು ಕಡೆ ತುಸು ತಾಂತ್ರಿಕ ದೋಷ ಎದುರಾಗಿದೆ ಎನ್ನಲಾಗಿದ್ದರೂ ಭಾಗಶಃ ಖರೀದಿ ಕೇಂದ್ರಗಳಲ್ಲಿ ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದೆ.
ರಾಗಿ ಖರೀದಿ ಪ್ರಕ್ರಿಯೆ ನೋಂದಣಿಗೆ ಕಾಲಮಿತಿ ವಿಧಿಸಿಲ್ಲವಾದ್ದರಿಂದ ನೋಂದಣಿ ಪ್ರಕ್ರಿಯೆ ಮುಂದುವರೆದಿದೆ. ಆದರೆ ಇದುವರೆಗಿನ ಇಲಾಖೆಯ ನಿರೀಕ್ಷೆಯಷ್ಟು ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿಕೊಂಡ ರೈತರು ಕಡ್ಡಾಯವಾಗಿ ರಾಗಿ ನೀಡಬೇಕು ಎಂಬ ನಿಯಮವಿಲ್ಲ ಅಥವಾ ಇಷ್ಟೇ ಪ್ರಮಾಣ ನೀಡಬೇಕು ಎಂಬುದು ಕಡ್ಡಾಯವಾಗಿಲ್ಲವಾದ್ದರಿಂದ ಮುಂದಿನ ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ರಾಗಿ ಖರೀದಿಯಾಗಲಿದೆ ಎಂಬ ಅಂಕಿ ಅಂಶ ದೊರಕಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಸಚಿವರ ಎಚ್ಚರಿಕೆ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸುವ ಆಹಾರ ಧಾನ್ಯಗಳ ಗುಣಮಟ್ಟವನ್ನು ಕಾಪಾಡಬೇಕು ಲೋಪವೆಸಗಿದ್ದಲ್ಲಿ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಖಾತೆ ಹಾಗೂ ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಸಂವಾದದ ಮೂಲಕ ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಜಿಲ್ಲಾಧಿಕಾರಿಯೇ ಅಧ್ಯಕ್ಷರಿದ್ದು ಆಹಾರ ಧಾನ್ಯಗಳು ಗುಣಮಟ್ಟದಲ್ಲಿ ವ್ಯತ್ಯಾಸವಿದ್ದಲ್ಲಿ ಅಧಿಕಾರಿಗಳನ್ನು ಸ್ಥಳದಲ್ಲಿಯೇ ಅವರ ಮೇಲೆ ಕ್ರಮ ತೆಗೆದುಕೊಳ್ಳುಬೇಕು ಸೂಚನೆ ನೀಡಿದ್ದಾರೆ. ಪ್ರತಿ ಕ್ವಿಂಟಾಲ್ ರಾಗಿಗೆ 4290 ನಿಗಧಿಯಾಗಿದ್ದು,ಈ ದರದಲ್ಲಿ ರೈತರಿಂದ ಖರೀದಿಸಿ ಅವರಿಗೆ ಸರಿಯಾದ ಸಮಯಕ್ಕೆ ಹಣ ಸಂದಾಯ ಮಾಡಬೇಕು, ಜಿಲ್ಲಾಧಿಕಾರಿಗಳು ಖರೀದಿ ಕೇಂದ್ರಗಳ ಸ್ಥಳಗಳಲ್ಲಿ ರೈತರಿಗೆ ಕುಡಿಯುವ ನೀರು ಹಾಗೂ ಶಾವಿಯಾನದ ವ್ಯವಸ್ಥೆ ಕಲ್ಲಿಸಬೇಕು ಮಾರ್ಚ್‌ನಲ್ಲಿ ಹೆಚ್ಚಿನ ಬಿಸಿಲಿರಿವುದರಿಂದ ರೈತರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ಜಿಲ್ಲಾಧಿಕಾರಿಗಳೇ ನೇರವಾಗಿ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ಮಾಡಬೇಕು, ರಾಗಿಯನ್ನು ಖರೀದಿಸುವ ಕೇಂದ್ರಗಳಲ್ಲಿ ತೂಕದಲ್ಲಿ ವ್ಯತ್ಯಾಸಗಳು ಕಾಣದಂತೆ ನಿಗಾವಹಿಸಬೇಕು ಎಂದು ತಿಳಿಸಿದ್ದಾರೆ.
ರಾಗಿ ಖರೀದಿ ಆರಂಭ: ನೋಂದಾಯಿತ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಗೆ ಮಾ.1ರಿಂದ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು ಮಾ.3 ರಿಂದ ಜಿಲ್ಲೆಯ ಎಲ್ಲ ತಾಲೂಕು ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ, ನೋಂದಾಯಿತ ರೈತರು ಸಂಬಂಧಪಟ್ಟ ತಾಲೂಕುಗಳ ಖರೀದಿ ಕೇಂದ್ರಗಳಿಗೆ ರಾಗಿಯನ್ನು ನಿಯಮಾನುಸಾರ ನೀಡಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ತಿಳಿಸಿದ್ದಾರೆ. 2024-25 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದು, ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದು ನೊಂದಾಯಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಪರ್ಕಿಸಬಹುದು: ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಖರೀದಿ ಏಜೆನ್ಸಿಯಾದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಖರೀದಿ ಅಧಿಕಾರಿಗಳನ್ನು ನೇಮಿಸಲಾಗಿದೆ. ನೆಲಮಂಗಲ ತಾಲೂಕು ಖರೀದಿ ಅಧಿಕಾರಿ ನಾರಾಯಣಮೂರ್ತಿ 9482991630, ದೊಡ್ಡಬಳ್ಳಾಪುರ ಎಚ್.ಎನ್.ನಾರಾಯಣ್ 9886141435, ದೇವನಹಳ್ಳಿ ಎಂ.ಅಚ್ಯೂತ್ 9900136687, ಹೊಸಕೋಟೆ ಲಕ್ಷ್ಮೀ ನಾರಾಯಣ 9880700975 ಅವರನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಾ.3ರಿಂದ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ, ಇದುವರೆಗೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 25089 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಬಹುತೇಕ ನಿರೀಕ್ಷೆಯಷ್ಟು ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಕ್ಕೆ ಇನ್ನು ಕಾಲಮಿತಿ ನಿಗಧಿಗೊಳಿಸಿಲ್ಲವಾದ್ದರಿಂದ ಆಸಕ್ತ ರೈತರು ಹೆಸರು ನೋಂದಾಯಿಕೊಳ್ಳಲು ಅವಕಾಶವಿದೆ.
ಶಂಕರ್‌ಮೂರ್ತಿ, ಉಪನಿರ್ದೇಶಕ ಆಹಾರ ಇಲಾಖೆ ಬೆಂ.ಗ್ರಾಮಾಂತರ