ಏಪ್ರಿಲ್‍ನಿಂದ ಹೊಗೆ ಕಡಿಮೆ ಹೊರ ಸೂಸುವ ವಾಹನ ಮಾತ್ರ ನೋಂದಣಿ

RTO News
Published on

ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಅತಿ ಕಡಿಮೆ ಹೊಗೆ ಹೊರ ಸೂಸುವ ವಾಹನ ಮಾತ್ರ ನೋಂದಾಯಿಸುವ ಕಾಯ್ದೆ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರಪ್ಪ ಶಿರೋಳ್ಕರ್ ತಿಳಿಸಿದರು.

ನಗರದ ಶಾರದಾ ಸ್ಕೂಲ್ ಆಫ್ ಲಾ ಮತ್ತು ಸಾರಿಗೆ ಇಲಾಖೆ ಸಹಯೋಗದಲ್ಲಿ ಕಲ್ಯಾಣನಗರದ ಕಾನೂನು ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ-2020 ಉದ್ಘಾಟಿಸಿ ಅವರು ಮಾತನಾಡಿದರು.

ಮಾಲಿನ್ಯಕ್ಕೆ ವಾಹನಗಳ ಪ್ರಭಾವ ಅಧಿಕ
ವಾಯು ಮಾಲಿನ್ಯಗೊಳ್ಳುವಲ್ಲಿ ವಾಹನಗಳ ಪ್ರಭಾವವೇ ಅತ್ಯಧಿಕ. ಜಿಲ್ಲೆಯಲ್ಲಿ ಸುಮಾರು 4 ಲಕ್ಷ ವಾಹನಗಳು ಓಡಾಡುತ್ತಿವೆ. ಪ್ರತಿವರ್ಷ ಸರಾಸರಿ 25 ಸಾವಿರ ವಾಹನಗಳು ರಸ್ತೆಯ ಮೇಲೆ ಬರುತ್ತಿವೆ. ಇವು ಹೊರಸೂಸುವ ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಮತ್ತಿತರ ವಿಷಕಾರಿ ಅನಿಲಗಳು ವಾಯು ಮಾಲಿನ್ಯಗೊಳಿಸುತ್ತಿವೆ. ಸಸ್ಯ ಶುದ್ಧ ಗಾಳಿ ಆರೋಗ್ಯ ವರ್ಧಕ. ಮಾಲಿನ್ಯ ಮುಕ್ತ ಪರಿಸರ ಜೀವನವನ್ನು ಸುಂದರಗೊಳಿಸುತ್ತದೆ ಎಂದರು.

ವಾಹನ ಸುಸ್ಥಿತಿಯಲ್ಲಿಡಬೇಕು
ವಾಹನದ ಹೊಗೆ ನಿಯಂತ್ರಣ ಮಾಡಿ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ವಾಯುಮಾಲಿನ್ಯ ನಿಯಂತ್ರಿಸಲು ವಾಹನಗಳನ್ನು ಸದಾ ಸುಸ್ಥಿತಿಯಲ್ಲಿಡಬೇಕು. ಕಲಬೆರಕೆ ಇಂಧನ ಬಳಕೆ ಬೇಡ. ಟ್ರಾಫಿಕ್ ಸಿಗ್ನಲ್‍ನಲ್ಲಿ ಇಂಜಿನ್ ಬಂದ್ ಮಾಡಬೇಕು. ಏರ್‍ಫಿಲ್ಟರ್ ಮತ್ತು ಸ್ಪಾರ್ಕ್ ಪ್ಲಗ್‍ಗಳನ್ನು ಸ್ವಚ್ಛವಾಗಿಡಬೇಕೆಂದು ಅವರು ಸಲಹೆ ನೀಡಿದರು.

ಕರೊನಾ ಎಚ್ಚರಿಕೆ ಗಂಟೆ
ಜಿಲ್ಲಾ ಗೈಡ್ಸ್ ಆಯುಕ್ತೆ ಡಿ.ಎಸ್.ಮಮತ ಮಾಲಿನ್ಯ ನಿಯಂತ್ರಣದಲ್ಲಿ ಕಾನೂನಿನ ಪಾತ್ರ ಕುರಿತಂತೆ ವಿಶೇಷ ಉಪನ್ಯಾಸ ನೀಡಿ, ಸಂವಿಧಾನ ಎಲ್ಲ ಕಾನೂನುಗಳ ತಾಯಿ. ಭೂಮಿ, ಜಲ, ವಾಯು ಸೇರಿದಂತೆ ಪರಿಸರ ಮಾಲಿನ್ಯ ನಿಯಂತ್ರಣಗೊಳಿಸುವ ಕಾಯ್ದೆಗಳೆಲ್ಲವೂ ಸಂವಿಧಾನದಲ್ಲಿ ಅಡಕವಾಗಿವೆ. ಕಾನೂನು ವಿದ್ಯಾರ್ಥಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಬೇಕು. ಕರೊನಾ ನಮಗೆ ಎಚ್ಚರಿಕೆಯ ಗಂಟೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ವಾಸ್ತವವಾಗಿ ಇದು ಪರಿಸರವನ್ನು ಸ್ವಚ್ಛಗೊಳಿಸಿದೆ ಎಂದರು.

ವಾಯುಮಾಲಿನ್ಯದಿಂದ 74 ಸಾವಿರ ಸಾವು
ಆರ್‍ಟಿಒ ಕಚೇರಿ ಅಧೀಕ್ಷಕ ಎಚ್.ಸಿ.ರಾಮಚಂದ್ರಪ್ಪ ಮಾತನಾಡಿ ಜನಸಂಖ್ಯಾ ಸ್ಫೋಟದಿಂದ ಭೂಮಿಯ ಮೇಲೆ ಒತ್ತಡ ಹೆಚ್ಚಾಗಿ ವಾಯು ಸೇರಿದಂತೆ ನಿಸರ್ಗ ಮಾಲಿನ್ಯಗೊಳ್ಳುತ್ತಿದೆ. ವಾಹನಗಳು, ಕಾರ್ಖಾನೆ, ಕಟ್ಟಡ, ರಸ್ತೆ, ಅಣೆಕಟ್ಟೆ ಸೇರಿದಂತೆ ಹೊಸ ನಿರ್ಮಾಣದಿಂದ ಧೂಳಿನ ಕಣಗಳು ವಾತಾವರಣ ಸೇರಿ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಪ್ರತಿವರ್ಷ ವಿಶ್ವದಲ್ಲಿ 3.8 ಲಕ್ಷ ಜನ, ಭಾರತದಲ್ಲಿ 74 ಸಾವಿರ ಜನ ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾರದಾ ಸ್ಕೂಲ್ ಆಫ್ ಲಾ ಪ್ರಾಚಾರ್ಯೆ ಸಿ.ಭಾಗ್ಯಲಕ್ಷ್ಮಿ ಮಾತನಾಡಿ ಮಲಿನಗೊಂಡ ವಾಯುಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮ ಅರಿಯಬೇಕು. ಮಾಲಿನ್ಯ ನಿಯಂತ್ರಣ ಕ್ರಮಗಳ ಬಗ್ಗೆ ನಾವು ಅರಿತುಕೊಂಡು ಆಚರಿಸುವುದರ ಕುಟುಂಬ, ಸ್ನೇಹಿತರು, ಸುತ್ತಮುತ್ತಲಿನವರಿಗೂ ಜಾಗೃತಿಗೊಳಿಸುವುದರಿಂದ ಸಮಾಜಕ್ಕೆ ಕಿಂಚಿತ್ ಕೊಡುಗೆ ನೀಡಿದಂತಾಗುವುದು ಎಂದರು.

ಕಾನೂನು ಕಾಲೇಜು ಉಪನ್ಯಾಸಕಿ ಜಿ.ಸ್ವಾತಿ, ಸಾರಿಗೆ ಇಲಾಖೆಯ ತಾಂತ್ರಿಕ ಸಹಾಯಕ ಎಚ್.ಜಿ.ಸಂತೋಷ್, ವಿದ್ಯಾರ್ಥಿನಿಯರಾದ ಪೂಜಾ, ಸಂಗೀತ, ಸಾರಿಗೆ ಕಾರ್ಯಕ್ರಮದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net