

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ರಾಗಿ ತೆನೆ ಕಟಾವಿನ ವೇಳೆ ಬೆಂಬಿಡದೆ ಕಾಡಿದ ಸೈಕ್ಲೋನ್ ಸಂಕಷ್ಟದ ನಡುವೆಯೂ ಜಿಲ್ಲೆಯಲ್ಲಿ ಈ ಬಾರಿ ರಾಗಿ ಬಂರ್ ಲಸು ಬಂದಿದ್ದು, ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈ ಬಾರಿ ಕನಿಷ್ಟ 5 ಲಕ್ಷ ಕ್ವಿಂಟಾಲ್ ರಾಗಿ ಖರೀದಿಯ ನಿರೀಕ್ಷೆಯಿದ್ದು ಈಗಾಗಲೇ 2.70 ಲಕ್ಷ ಕ್ವಿಂಟಾಲ್ ರಾಗಿ ನೋಂದಣಿಯಾಗಿದೆ.
ದೊಡ್ಡಬಳ್ಳಾಪುರ ರಾಗಿ ಖರೀದಿ ಕೇಂದ್ರದಲ್ಲಿ ಈಗಾಗಲೇ 1.43 ಲಕ್ಷ ಕ್ವಿಂಟಾಲ್ ರಾಗಿ ಮಾರಾಟಕ್ಕೆ ನೋಂದಣಿಯಾಗಿದ್ದು ಜಿಲ್ಲೆಯಲ್ಲಿಯೇ ತಾಲೂಕು ಮುಂಚೂಣಿಯಲ್ಲಿದೆ, ಕೊನೆ ಸ್ಥಾನದಲ್ಲಿ ಹೊಸಕೋಟೆಯಿದ್ದು 11 ಸಾವಿರ ಕ್ವಿಂಟಾಲ್ ರಾಗಿ ಮಾರಾಟಕ್ಕೆ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. 2025ರ ಜನವರಿಯಿಂದ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಮಾರ್ಚ್ 31 ಕ್ಕೆ ಖರೀದಿ ಪ್ರಕ್ರಿಯೆ ಕೊನೆಗೊಳ್ಳಲಿದೆ. ಈ ವೇಳೆಗೆ ಸುಮಾರು 5 ಲಕ್ಷ ಕ್ವಿಂಟಾಲ್ ರಾಗಿ ಖರೀದಿಯಾಗಬಹುದೆಂದು ಅಂದಾಜಿಸಲಾಗಿದೆ. ಈಗಾಗಲೇ 2.70 ಲಕ್ಷ ಕ್ವಿಂಟಾಲ್ ರಾಗಿ ಮಾರಾಟಕ್ಕೆ ನೋಂದಣಿಯಾಗಿದ್ದು, ಬಾಕಿ ಇರುವ 2.30 ಲಕ್ಷ ಕ್ವಿಂಟಾಲ್ ರಾಗಿಗೆ ನೋಂದಣಿಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಶೇ. 54.13 ನೋಂದಣಿಯಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
18,685 ರೈತರು ನೋಂದಣಿ: ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ರೈತರ ಹೆಸರು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಇದರನ್ವಯ ಈಗಾಗಲೇ ದೇವನಹಳ್ಳಿಯಲ್ಲಿ 3075 ರೈತರು, ದೊಡ್ಡಬಳ್ಳಾಪುರದಲ್ಲಿ 9878, ಹೊಸಕೋಟೆಯಲ್ಲಿ 794 ಹಾಗೂ ನೆಲಮಂಗಲ ವ್ಯಾಪ್ತಿಯಲ್ಲಿ 4938 ಮಂದಿ ರೈತರು ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ರಾಗಿ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆ ಕಡ್ಡಾಯಗೊಳಿಸಿದ್ದು, ನೋಂದಣಿಯಾದರೆ ಮಾತ್ರ ರಾಗಿ ಖರೀದಿಸಲಾಗುವುದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
4260 ರೂ.ಬೆಂಬಲ ಬೆಲೆ: ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್‌ಗಳನ್ನು ಮೀರದಂತೆ ಹಾಗೂ ಎ್ಎಕ್ಯೂ ಮಾನದಂಡಗಳಂತೆ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಗುಣಮಟ್ಟದ ರಾಗಿ ಪರಿಶೀಲನೆ ಭಾಗವಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ.
2 ಬಾರಿ ಬಯೋಮೆಟ್ರಿಕ್: ಪ್ರಸಕ್ತ ಸಾಲಿನ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಎರಡು ಬಾರಿ ಬಯೋಮೆಟ್ರಿಕ್ ಬಳಕೆಯಾಗುತ್ತದೆ ನೋಂದಣಿ ವೇಳೆಯಲ್ಲಿ ಒಂದು ಬಾರಿ ಹಾಗೂ ಇನ್ನೊಂದು ಬಾರಿ ಖರೀದಿ ವೇಳೆಯಲ್ಲಿ ಪ್ರಕ್ರಿಯೆ ನಡೆಯಲಿದೆ ಹಾಗಾಗಿ ನೋಂದಾಯಿತ ರೈತರೇ ರಾಗಿ ಖರೀದಿ ಕೇಂದ್ರಗಳಿಗೆ ರಾಗಿ ತರುವುದು ಕಡ್ಡಾಯವಾಗಿರುತ್ತದೆ. ನೋಂದಣಿಯಾದ ರೈತರಿಂದ ಮಾತ್ರ ರಾಗಿ ಖರೀದಿ ಮಾಡಲಾಗುವುದು.
ಪ್ರೋಟ್ಸ್ ಐಡಿ ಕಡ್ಡಾಯ: ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾಗಿರುವ ಫೂಟ್ಸ್‌ಐಡಿ ಸಂಖ್ಯೆಯನ್ನು ಪಡೆದು ರಾಗಿ ಖರೀದಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು. ಫೂಟ್ಸ್ ಐಡಿ ಇಲ್ಲದ ರೈತರ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಇರುವುದಿಲ್ಲ ಹಾಗೂ ನೋಂದಾಣಿ ಸಮಯದಲ್ಲಿ ರೈತರು ತಮ್ಮ ಆಧಾರ್‌ಕಾರ್ಡ್ ತರುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
ರಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳ ವಿವರ *ನೆಲಮಂಗಲ: ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕೆಂಪಲಿಂಗನಹಳ್ಳಿ ಕ್ರಾಸ್, ಕುಣಿಗಲ್ ರಸ್ತೆ
*ದೊಡ್ಡಬಳ್ಳಾಪುರ: ರೈತ ಭವನ ಕೇಂದ್ರ, ಎಂಪಿಎಂಸಿ ಯಾರ್ಡ್
* ದೇವನಹಳ್ಳಿ: ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕುರುಬರ ದೊಡ್ಡಿ, ಚಿಕ್ಕಬಳ್ಳಾಪುರ ರಸ್ತೆ
* ಹೊಸಕೋಟೆ: ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ವೀರಭದ್ರೇಶ್ವರ ರೈಸ್‌ಮಿಲ್ ಕಾಂಪೌಂಡ್, ಮಾಲೂರು ರಸ್ತೆ.
-------
ಸರ್ಕಾರದ ಆದೇಶದಂತೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಈ ಸಾಲಿನಲ್ಲಿ 5 ಲಕ್ಷ ಕ್ವಿಂಟಾಲ್ ರಾಗಿ ಖರೀದಿಸುವ ನಿರೀಕ್ಷೆ ಇದ್ದು ಈಗಾಗಲೇ ಶೇ.54.13 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ 2.70 ಲಕ್ಷ ಕ್ವಿಂಟಾಲ್ ರಾಗಿಗೆ ನೋಂದಣಿಯಾಗಿದೆ. ಮಾರ್ಚ್ 31 ರವರೆಗೆ ಕಾಲಾವಧಿ ಇದ್ದು ಗುರಿ ಮುಟ್ಟುವ ನಿರೀಕ್ಷೆ ಇದೆ.
ಶಂಕರ್‌ಮೂರ್ತಿ, ಉಪ ನಿರ್ದೇಶಕ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಬೆಂ.ಗ್ರಾಮಾಂತರ
----------