

ಕಳಸ: ಬಲಿಗೆ ಗ್ರಾಮದ ಕ್ಯಾತನಮಕ್ಕಿ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಅರಣ್ಯ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ತಿಳಿಸಿದ್ದಾರೆ.
ದುರ್ಗಮವಾದ ಈ ಪ್ರದೇಶಕ್ಕೆ ಬೈಕ್ ಮತ್ತಿತರ ಖಾಸಗಿ ವಾಹನಗಳ ಸಂಚಾರದಿಂದ ಬಹಳಷ್ಟು ತೊಂದರೆಯಾಗುತ್ತಿದೆ. ರಕ್ಷಿತ ಅರಣ್ಯಕ್ಕೆ ಒಳಪಡುವ ಈ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್ ಮಾಲೀಕರು ಕಡ್ಡಾಯವಾಗಿ ಅರಣ್ಯ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅರಣ್ಯ ಇಲಾಖೆ ನೀತಿ ನಿಯಮಾವಳಿಗಳಿಗೆ ಒಳಪಟ್ಟು ಜೀಪ್‌ಗಳು ಸಂಚರಿಸಬೇಕು. ಜುಲೈ 10ರ ಒಳಗೆ ವಾರ್ಷಿಕ ಅಥವಾ ಅರ್ಧವಾರ್ಷಿಕ ಶುಲ್ಕ ಪಾವತಿಸಿ ಅಧಿಕೃತ ಬ್ಯಾಡ್ಜ್ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಈ ಬಗ್ಗೆ 2021ರಲ್ಲೇ ನಿರ್ಣಯವಾಗಿದ್ದು, ನೋಂದಣಿ ಮಾಡಿಕೊಳ್ಳದ ವಾಹನಗಳು ಮತ್ತಿತರ ಖಾಸಗಿ ವಾಹನಗಳಿಗೆ ಗಿರಿಶ್ರೇಣಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.