ಮೈಸೂರಿನಲ್ಲಿ ಶ್ವಾನ ಸಾಕಾಣಿಕೆಗೆ ನೋಂದಣಿ ಕಡ್ಡಾಯ..!

dog show 1
Published on
  • ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ
  • ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆದೇಶ


ಸದೇಶ್ ಕಾರ್ಮಾಡ್ ಮೈಸೂರು
ಇತ್ತೀಚಿನ ವರ್ಷಗಳಲ್ಲಿ ಶ್ವಾನಗಳನ್ನು ಸಾಕುವವರು, ಶ್ವಾನಗಳ ತಳಿ ಸಂವರ್ಧನೆ ಹಾಗೂ ಮಾರಾಟ ಮಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಶ್ವಾನಗಳ ತಳಿ ಸಂವರ್ಧನೆಯಿಂದ ಹಲವರು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಆದರೆ, ಎಲ್ಲ ತಳಿಸಂವರ್ಧನ ಕೇಂದ್ರಗಳಲ್ಲಿ ಶ್ವಾನಗಳ ಬದುಕು ಉತ್ತಮವಾಗಿದೆಯೇ?

ಹೀಗೊಂದು ಪ್ರಶ್ನೆಗೆ ಹಲವರ ಬಳಿ ಉತ್ತರ ಇಲ್ಲ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಲುವಾಗಿಯೇ ಶ್ವಾನಗಳ ತಳಿ ಸಂವರ್ಧನೆ ಮತ್ತು ಮಾರಾಟ ಮಾಡುವವರು ಹಾಗೂ ಮುದ್ದಿನ ಪ್ರಾಣಿಗಳ ಮಳಿಗೆ ಚಟುವಟಿಕೆಗಳಲ್ಲಿ ತೊಡಗಿರುವವರು ಇನ್ನು ಮುಂದೆ ಕರ್ನಾ ಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ (ನಾಯಿ ತಳಿ ಸಂವರ್ಧನೆ ಮತ್ತು ಮಾರಾಟ ನಿಯಮ-2017, ಮುದ್ದಿನ ಪ್ರಾಣಿಗಳ ಮಳಿಗೆ ನಿಯಮ 2018) ಸೆಕ್ಷನ್ 3, 4 ಮತ್ತು 5ರ ಅಡಿಯಲ್ಲಿ ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ನೋಂದಣಿ ಪ್ರಕ್ರಿಯೆಯೆಯಿಂದ ಜಿಲ್ಲೆಯಲ್ಲಿ ಯಾರೆಲ್ಲ ಶ್ವಾನಗಳ ತಳಿಸಂವರ್ಧನೆ ಮತ್ತು ಮಾರಾಟದಲ್ಲಿ ತೊಡಗಿದ್ದಾರೆ? ಅವರು ಶ್ವಾನಗಳ ಆರೋಗ್ಯದ ಕಡೆಗೆ ಗಮನ ಹರಿಸುತ್ತಿದ್ದಾರೆಯೇ ಹಾಗೂ ಶ್ವಾನಗಳು ಉತ್ತಮ ಬದುಕು ನಡೆಸುವ ವಾತಾವರಣ ನಿರ್ಮಾಣ ಮಾಡಿದ್ದಾರೆಯೇ ಎಂದು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಶ್ವಾನಗಳ ಮೇಲೆ ನಡೆಯುವ ಕ್ರೌರ್ಯ ತಡೆಗಟ್ಟಲು ಇದೊಂದು ಮಹತ್ವದ ಹೆಜ್ಜೆಯಾಗಿದೆ.

ಜಿಲ್ಲೆಯಲ್ಲಿ ಸುಮಾರು 20 ರಿಂದ 25 ಶ್ವಾನಗಳ ತಳಿ ಸಂವರ್ಧಕರು ಇರಬಹುದು ಎಂದು ಅಂದಾಜಿಸಲಾಗಿದೆ. ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಇವರಿಗೆ ಒಂದು ತಿಂಗಳ ಗಡುವು ನೀಡಲಾಗಿದೆ. ಅಷ್ಟರೊಳಗೆ ಎಲ್ಲರು ನೋಂದಣಿ ಮಾಡಿಸಿಕೊಂಡರೆ ಜಿಲ್ಲೆಯಲ್ಲಿ ಎಷ್ಟು ತಳಿ ಸಂವರ್ಧಕರು ಇದ್ದಾರೆ ಎಂಬ ಸ್ಪಷ್ಟ ಮಾಹಿತಿ ದೊರೆಯುತ್ತದೆ. ಒಂದುವೇಳೆ ನೋಂದಣಿ ಮಾಡಿಸಿಕೊಳ್ಳಲು ಆಸಕ್ತಿ ತೋರದೆ ಅನಧಿಕೃತವಾಗಿ ತಳಿಸಂವರ್ಧನೆಯಲ್ಲಿ ತೊಡಗುವುದು ಕಂಡು ಬಂದರೆ ಅಂತಹ ಶ್ವಾನ ತಳಿಸಂವರ್ಧನಾ ಕೇಂದ್ರಗಳ ಮೇಲೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶ್ವಾನಗಳನ್ನು ವಶಪಡಿಸಿಕೊಂಡು ಕೇಂದ್ರಕ್ಕೆ ಬೀಗಮುದ್ರೆ ಹಾಕಲಿದ್ದಾರೆ.

ಶ್ವಾನಗಳಿಗೆ ಗುಣಮಟ್ಟದ ಆಹಾರ ಹಾಗೂ ಶುದ್ಧವಾದ ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಬೇಕು, ಅವುಗಳು ವಾಸಮಾಡುವ ಪಂಜರವನ್ನು ಪ್ರತಿನಿತ್ಯ ಶುಚಿಗೊಳಿಸಬೇಕು, ಶ್ವಾನಗಳಿಗೆ ಓಡಾಡಲು ಸೂಕ್ತವಾದ ವಾತಾವರಣ ನಿರ್ಮಾಣ ಮಾಡಬೇಕು, ಕಡ್ಡಾಯವಾಗಿ ವರ್ಷಕ್ಕೆ ಒಮ್ಮೆ ರೇಬಿಸ್ ಚುಚ್ಚುಮದ್ದು ಕೊಡಿಸಬೇಕು ಹಾಗೂ ಅವುಗಳ ಆರೋಗ್ಯ ಕಾಪಾಡಲು ಅಗತ್ಯ ಔಷಧಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು, ಕಾಲ ಕಾಲಕ್ಕೆ ಪಶುವೈದ್ಯರಿಂದ ಶ್ವಾನಗಳ ಆರೋಗ್ಯ ತಪಾಸಣೆ ನಡೆಸಬೇಕು.

ಇಷ್ಟು ಮಾತ್ರವಲ್ಲದೆ ಪ್ರತಿ ತಳಿ ಸಂವರ್ಧಕರು ಕಡ್ಡಾಯವಾಗಿ ಪ್ರತಿಯೊಂದು ಶ್ವಾನಗಳ ಜನ್ಮ ದಿನಾಂಕ, ಅದರ ಹೆಸರು, ಲಿಂಗ, ತಳಿಯ ಹೆಸರು, ಬಣ್ಣ, ಅಳವಡಿಸಿರುವ ಮೈಕ್ರೋಚಿಪ್ ನಂಬರ್, ವೈಯಕ್ತಿಕ ಆರೋಗ್ಯದ ಕುರಿತು ದಾಖಲೆ ಹೊಂದಿರಬೇಕು. ಅಲ್ಲದೆ ಆ ಶ್ವಾನವನ್ನು ಖರೀದಿಸಿದ ವ್ಯಕ್ತಿಯ ಮಾಹಿತಿ ಸೇರಿದಂತೆ ಶ್ವಾನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ದಾಖಲೀಕರಣ ಮಾಡುವುದು ಕಡ್ಡಾಯ.

ಸ್ವಚ್ಛವಿಲ್ಲದ ಪಂಜರಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ವಾನಗಳನ್ನು ಇಡುವುದು, ತಾಯಿ ಶ್ವಾನದಿಂದ ಬೇರ್ಪಡಿಸದ ಶ್ವಾನ ಮರಿಗಳನ್ನು ಮಾರಾಟಕ್ಕೆ ಪ್ರದರ್ಶಿಸುವುದು, ಆಹಾರ ಅಥವಾ ನೀರಿನ ಸೌಕರ್ಯ ನೀಡದೆ ಇರುವುದು, ಗಾಯಗೊಂಡ ಶ್ವಾನಗಳಿಗೆ ಸೂಕ್ತ ಚಿಕಿತ್ಸೆ ನೀಡದೆ ಇರುವುದು ಅಪರಾಧವಾಗಿದ್ದು, ಅಂತಹ ತಳಿ ಸಂವರ್ಧಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಹಾಗಾಗಿ ಇನ್ನು ಮುಂದೆ ತಳಿ ಸಂವರ್ಧಕರು ಶ್ವಾನಗಳನ್ನು ಸಾಕಲು ಸೂಕ್ತ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಳ್ಳುವುದು ಜತೆಗೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ತಳಿಸಂವರ್ಧಕರು ನಗರದ ಧನ್ವಂತರಿ ರಸ್ತೆಯಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ 30 ದಿನಗಳ ಒಳಗೆ ಭೇಟಿ ನೀಡಿ ನಿಗದಿತ ಶುಲ್ಕ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬಹುದು.

ತಳಿಸಂವರ್ಧಕರಿಗೂ ಅನುಕೂಲ
ಶ್ವಾನಗಳ ಮೇಲೆ ನಡೆಯುವ ಕ್ರೌರ್ಯ ತಡೆಗಟ್ಟಿಗೆ ಅವುಗಳಿಗೆ ಉತ್ತಮ ಬದುಕು ದೊರೆಯುವಂತೆ ಮಾಡಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಶ್ವಾನ ತಳಿಸಂವರ್ಧಕರು ನೋಂದಣಿ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಶ್ವಾನಗಳಿಗೆ, ಶ್ವಾನಗಳನ್ನು ಖರೀದಿಸುವ ವ್ಯಕ್ತಿಗಳಿಗೆ ಮಾತ್ರವಲ್ಲದೆ ತಳಿಸಂವರ್ಧಕರಿಗೂ ಅನುಕೂಲವಾಗಲಿದೆ. ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಅಧಿಕೃತ ನೋಂದಣಿ ಪಡೆದ ತಳಿಸಂವರ್ಧಕರಿಂದ ಶ್ವಾನಗಳನ್ನು ಖರೀದಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಜನರಿಗೆ ಮಾರ್ಗದರ್ಶನ ನೀಡುತ್ತಾರೆ. ಇದರಿಂದ ಶ್ವಾನಗಳ ಅಧಿಕೃತ ತಳಿಸಂವರ್ಧಕರಿಗೆ ಉತ್ತಮ ಮಾರುಕಟ್ಟೆ ಪಡೆಯಲು ಸಹಕಾರಿಯಾಗಲಿದೆ.


ಶ್ವಾನಗಳ ತಳಿಸಂವರ್ಧಕರು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ನೋಂದಣಿ ಮಾಡದೆ ಇರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅಂತಹ ಶ್ವಾನ ತಳಿಸಂವರ್ಧನಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಶ್ವಾನಗಳನ್ನು ವಶಕ್ಕೆ ಪಡೆಯಲಾಗುವುದು. ಶ್ವಾನಗಳ ಮೇಲಿನ ಕ್ರೌರ್ಯ ತಡೆಯುವ ಉದ್ದೇಶದಿಂದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ರೂಪಿಸಲಾಗಿದ್ದು, ಜಿಲ್ಲೆಯಲ್ಲಿ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು.

ಡಾ. ಬಿ.ಎನ್. ಷಡಕ್ಷರಮೂರ್ತಿ, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net