ಅ.1ರಿಂದ ರಾಗಿ ಖರೀದಿಗೆ ನೋಂದಣಿ

23kolar3- dc meeting
Published on

ಕ್ವಿಂಟಾಲ್​ಗೆ 4,886 ರೂ. ನಿಗದಿ | ಲೋಪವಾಗದಂತೆ ಎಚ್ಚರ ವಹಿಸಲು ಡಿಸಿ ಸೂಚನೆ

ಕೋಲಾರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಅ.1ರಿಂದ ನೋಂದಣಿ ಪ್ರಾರಂಭಿಸಬೇಕು, ತೂಕ ಮತ್ತು ಗುಣಮಟ್ಟದಲ್ಲಿ ಲೋಪ ಆಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕುರಿತು ಆಯೋಜಿಸಿದ್ದ ಜಿಲ್ಲಾ ಟಾಸ್ಕ್​ ೋರ್ಸ್​ ಸಮಿತಿ ಸಭೆಯಲ್ಲಿ ಮಾತನಾಡಿ, ಸರ್ಕಾರವು ಒಂದು ಕ್ವಿಂಟಾಲ್​ ರಾಗಿಗೆ 4,886 ರೂ ನಿಗದಿಪಡಿಸಿದ್ದು, ರೈತರಿಗೆ ಇರದ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದು ತಿಳಿಸಿದರು.

ರಾಗಿ ಖರೀದಿಗೆ ಸಂಬಂಧಿಸಿದಂತೆ ಸಂಗ್ರಹಣಾ ಏಜೆನ್ಸಿಗಳು ಪ್ರತಿ ತಾಲೂಕು ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರ ತೆರೆಯಬೇಕು. ನೋಂದಣಿ ಪ್ರಕ್ರಿಯೆಗೆ ನಿಗದಿತ ಸ್ಥಳ ಗುರುತಿಸಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದರು.

ರೈತರಿಂದ ಖರೀದಿಸಿದ ರಾಗಿಯನ್ನು ಕ್ರೂಡಿಕರಿಸಿ ಶೇಖರಿಸಲು ಉಗ್ರಾಣಗಳ ವ್ಯವಸ್ಥಿತ ಗುಣಮಟ್ಟದಲ್ಲಿ ಇದೆಯೇ ಎಂದು ಪರಿಶೀಲಿಸಿ, ಅವಶ್ಯವಿದ್ದಲ್ಲಿ ಹೆಚ್ಚುವರಿ ಉಗ್ರಾಣ ನಿಗದಿಪಡಿಸಿ, ರೈತರು ಕಡ್ಡಾಯವಾಗಿ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್​ ದತ್ತಾಂಶದಲ್ಲಿ ನೋಂದಾಯಿಸಿಕೊಂಡು, ಫ್ರೂಟ್ಸ್​ ಐಡಿ ಪಡೆದಿರಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಫ್ರೂಟ್ಸ್​ ಐಡಿ ಕಡ್ಡಾಯ ಎಂದು ತಿಳಿಸಿದರು.

ಬಂಗಾರಪೇಟೆ ಮತ್ತು ಮಾಲೂರು ತಾಲೂಕುಗಳಲ್ಲಿ ಹೆಚ್ಚಾಗಿ ರಾಗಿ ಬೆಳೆಯುವುದರಿಂದ ಆ ಭಾಗದಲ್ಲಿ ಅವಶ್ಯ ಇದ್ದರೆ ಹೋಬಳಿ ಮಟ್ಟದಲ್ಲಿಯೂ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಬೇಕು ಎಂದು ಸೂಚಿಸಿದರು.

ಮುಳಬಾಗಿಲು ತಾಲೂಕಿನಲ್ಲಿ ಹೆಚ್ಚಾಗಿ ಭತ್ತ ಬೆಳೆಯುವುದರಿಂದ ಮಾತ್ರ

ಭತ್ತ ಖರೀದಿ ಕೇಂದ್ರವನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಜಿಲ್ಲೆಯ ಯಾವುದೇ ಭಾಗದ ರೈತರು ತಾವು ಬೆಳೆದಂತಹ ಭತ್ತವನ್ನು ತಂದು ಮಾರಾಟ ಮಾಡಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವಿಣ್​.ಪಿ.ಬಾಗೇವಾಡಿ, ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಲತಾ, ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಸಾದ್​ ರೆಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕುಮಾರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net