

ಮಂಡ್ಯ: ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ. ತಾಲೂಕುವಾರು ಮುಖ್ಯಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ ಮತ್ತು ಇತರೆ ಬೆಳೆಗಳನ್ನು ಹೋಬಳಿಮಟ್ಟಕ್ಕೆ ಅಧಿಸೂಚಿಸಿ ಮಂಜೂರಾತಿ ನೀಡಲಾಗಿದೆ.
ಭತ್ತ(ನೀರಾವರಿ)ದ ಬೆಳೆಗೆ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕು ಅಧಿಸೂಚಿತ ಗ್ರಾಪಂಗಳಲ್ಲಿ, ರಾಗಿ(ಮಳೆಯಾಶ್ರಿತ) ಬೆಳೆಗೆ ನಾಗಮಂಗಲ ಮತ್ತು ಪಾಂಡವಪುರ, ಮುಸುಕಿನಜೋಳ(ಮಳೆಯಾಶ್ರಿತ) ಬೆಳೆಗೆ ಮಳವಳ್ಳಿ ತಾಲೂಕಿನ ಅಧಿಸೂಚಿತ ಗ್ರಾಪಂಚಾನಲ್ಲಿ ವಿಮೆಗೆ ನೋಂದಾಯಿಸಬಹುದು. ಇನ್ನು ಹೋಬಳಿಮಟ್ಟದಲ್ಲಿ ಭತ್ತ (ನೀರಾವರಿ), ರಾಗಿ(ನೀರಾವರಿ), ರಾಗಿ(ಮಳೆಯಾಶ್ರಿತ), ಮುಸುಕಿನಜೋಳ(ನೀರಾವರಿ), ತೊಗರಿ(ಮಳೆಯಾಶ್ರಿತ), ಹುರುಳಿ(ಮಳೆಯಾಶ್ರಿತ), ನೆಲಗಡಲೆ(ಮಳೆಯಾಶ್ರಿತ), ಅಲಸಂದೆ(ಮಳೆಯಾಶ್ರಿತ), ಎಳ್ಳು(ಮಳೆಯಾಶ್ರಿತ), ಟೊಮ್ಯಾಟೋ ಮತ್ತು ಎಲೆಕೋಸು ಬೆಳೆಗಳಿಗೆ ವಿಮೆ ಮಾಡಿಸಬಹುದು.
ಯೋಜನೆಯ ಪರಿಷ್ಕೃತ ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು. ಒಂದು ವೇಳೆ ಇಚ್ಛೆಪಡದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಬೇಕು. ಆಸಕ್ತರು ಪಹಣಿ, ಕಂದಾಯ ರಶೀದಿ, ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಸಂಖ್ಯೆ ವಿವರಗಳೊಂದಿಗೆ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕಚೇರಿಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.