

ಹುಬ್ಬಳ್ಳಿ : ತೆರಿಗೆಯೇತರ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಜನರ ಆಸ್ತಿ ನೋಂದಣಿ ಶುಲ್ಕವನ್ನು ಮತ್ತೆ ಏರಿಸಿದೆ. ಇದೊಂದು ಗತಿಗೆಟ್ಟ ಸರ್ಕಾರ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ಜನರಿಗೆ ನೀಡುತ್ತಿರುವ ಅವೈಜ್ಞಾನಿಕ ಗ್ಯಾರಂಟಿಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಇದರ ಹೊರೆಯನ್ನು ಸಾರ್ವಜನಿಕರ ಮೇಲೆ ಹಾಕಿ ಬರೆ ಎಳೆಯಲಾಗುತ್ತಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನಿತ್ಯ ಜನರ ಮೇಲೆ ಒಂದಿಲ್ಲವೊಂದು ಹೊರೆ ಹಾಕಲಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಂರೂ ಈ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದೊಂದು ಜನ ವಿರೋಧಿ ಸರ್ಕಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರ 1 ರೂಪಾಯಿ ಉಚಿತವಾಗಿ ನೀಡಿ, ಜನರ ಜೇಬಿನಿಂದ 10 ರೂ. ಕೀಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ನಡೆಸಿದೆ ಎಂದು ಟೀಕಿಸಿದ್ದಾರೆ.
ದಿನಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಸರ್ಕಾರದ ಅವೈಜ್ಞಾನಿಕ ಆಡಳಿತದಿಂದಾಗಿ ಜನರು ಹೈರಾಣ ಆಗಿದ್ದಾರೆ. ಈ ಮುಂಚೆ ಜನನ, ಮರಣ ಪ್ರಮಾಣ ಪತ್ರಗಳ ಮೊದಲ ಪ್ರತಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ಆದರೀಗ, ಅದಕ್ಕೂ ಹಣ ನೀಡುವಂತೆ ವ್ಯವಸ್ಥೆ ಬಂದಿದೆ ಎಂದು ಪ್ರಕಟಣೆ ಮೂಲಕ ಶಾಸಕ ಮಹೇಶ ಟೆಂಗಿನಕಾಯಿ ಕಳವಳ ವ್ಯಕ್ತಪಡಿಸಿದ್ದಾರೆ.