

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರು ಮೊಬೈಲ್ ಆ್ಯಪ್ ಮೂಲಕವೇ ನೋಂದಣಿಗೆ ಅವಕಾಶ ಮಾಡಿಕೊಡಲಾಗುವುದು. ಇದರೊಟ್ಟಿಗೆ ನೋಂದಾಯಿತರಿಗೆ ನೀಡಲಾಗುವ ಕೊಡುಗೆಯನ್ನು ಜಿಲ್ಲಾವಾರು ಕೌಂಟರ್ ತೆರೆದು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಈ ಸಮಯದಲ್ಲಿ ಮಂಡ್ಯದ ಅಸ್ಮಿತೆಯಾದ ಮಂಡ್ಯ ಬೆಲ್ಲ ಮತ್ತು ಸಕ್ಕರೆಯನ್ನು ವಿತರಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಂದಣಿ ಮತ್ತು ಸ್ವಚ್ಛತಾ ಸಮಿತಿ ಅಧ್ಯಕ್ಷರೂ ಆದ ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೋಂದಣಿ ಹಾಗೂ ಸ್ವಚ್ಛತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೋಂದಣಿ ಮಾಡಿಕೊಳ್ಳಲು ಪ್ರತ್ಯೇಕ ಮೊಬೈಲ್ ಆ್ಯಪ್ ಅನ್ನು ರಚಿಸಲಾಗುವುದು. ಜತೆಗೆ ಅನಿವಾರ್ಯ ಸಂದರ್ಭದಲ್ಲಿ ಆಫ್‌ಲೈನ್‌ನಲ್ಲೂ ನೋಂದಣಿ ಮಾಡಿಕೊಂಡು ಕಸಾಪ ವತಿಯಿಂದ ಆನ್‌ಲೈನ್‌ಗೆ ಪರಿವರ್ತಿಸಲಾಗುವುದು. ಅಂತೆಯೇ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರೊಂದಿಗೆ ಚರ್ಚಿಸಿ ಪ್ರತಿನಿಧಿ ಶುಲ್ಕ ನಿಗದಿಪಡಿಸಿ ಆನ್‌ಲೈನ್‌ನಲ್ಲೇ ಪಡೆಯಲಾಗುವುದು. ನೋಂದಣಿ ಸಂದರ್ಭದಲ್ಲೇ ವಸತಿ ಅಗತ್ಯವಿರುವವರ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು ಎಂದರು.
ಮೊದಲು ನೋಂದಾಯಿಸಿ ಕೊಂಡವರಿಗೆ ಆದ್ಯತೆಯ ಮೇಲೆ ವಸತಿ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು. ಪ್ರತಿನಿಧಿಗಳಿಗೆ ವಸತಿ ಬಗ್ಗೆ ಮಾರ್ಗದರ್ಶನ ಮಾಡಲು ನೋಡಲ್ ಅಧಿಕಾರಿಯನ್ನಾಗಿ ಸಮಿತಿ ಸದಸ್ಯರನ್ನು ನೇಮಿಸಲಾಗುವುದು. ಸೌಲಭ್ಯ ಒದಗಿಸುವ ದೃಷ್ಟಿಯಿಂದ ಅಂತಿಮ ದಿನಾಂಕ ನಿಗದಿ ಮಾಡಿ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು. ಸರ್ಕಾರಿ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರ ಗೊಂದಲ ತಪ್ಪಿಸಲು ಸಮ್ಮೇಳನಕ್ಕೆ ಹಾಜರಾಗುವ ಪ್ರತಿನಿಧಿಗಳಿಗೆ ಆನ್‌ಲೈನ್ ಮೂಲಕವೇ ಪ್ರಮಾಣ ಪತ್ರ ನೀಡಲಾಗುವುದು ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಇಡೀ ಕಾರ್ಯಕ್ರಮದಲ್ಲಿ ಸ್ವಚ್ಛತೆಯೂ ಅತೀ ಮುಖ್ಯ. ಎಲ್ಲರೂ ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸೋಣ. ಸಮ್ಮೇಳನ 3 ದಿನ ನಡೆಯಲಿದ್ದು, ಒಂದು ದಿನಕ್ಕೆ 2 ಲಕ್ಷದಂತೆ ಜನರು ಬರುವ ಸಾಧ್ಯತೆ ಇದೆ. ಸಮ್ಮೇಳನವು ಪ್ಲಾಸ್ಟಿಕ್ ಹಾಗೂ ಧೂಳು ಮುಕ್ತ ಧ್ಯೇಯವನ್ನು ಹೊಂದಿದ್ದು, ಸ್ವಚ್ಛತೆ ಕಾಪಾಡುವುದು ಅತೀ ಮುಖ್ಯವಾಗಿದೆ. ಜತೆಗೆ ನೀರಿನ ವ್ಯವಸ್ಥೆಯು ಅಗತ್ಯವಾಗಿರಬೇಕು ಎಂದು ಸೂಚನೆ ನೀಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಮಾತನಾಡಿ, ಸಮ್ಮೇಳನದಲ್ಲಿ ಅಡುಗೆ ಮನೆ, ವೇದಿಕೆ ಕಾರ್ಯಕ್ರಮ, ಶೌಚಗೃಹ, ಪಾರ್ಕಿಂಗ್ ಸ್ಥಳಗಳಲ್ಲಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ನಿಯೋಜಿಸಬೇಕು. ಅವರಿಗೆ ಮಾಸ್ಕ್, ಟೀ ಶರ್ಟ್ ನೀಡಬೇಕು. ಸಮ್ಮೇಳನ ನಡೆಯುವ ಜಾಗದ ಸುತ್ತಮುತ್ತಲೂ ಅಲ್ಲಲ್ಲೇ ಕಸದ ಬುಟ್ಟಿಗಳನ್ನು ಇಡಬೇಕು. ವೇದಿಕೆ ಸಮಿತಿಯವರು ಯಾವ ಸ್ಥಳಗಳಲ್ಲಿ ಮಳಿಗೆಗಳನ್ನು ಇಡುತ್ತಾರೆಂಬ ಸಂಪೂರ್ಣ ಮಾಹಿತಿಯನ್ನು ಕೊಟ್ಟ ನಂತರ ನಾವು ಯೋಜನೆಯನ್ನು ತಯಾರಿಸಬಹುದು. ಒಂದೊಂದು ಮಳಿಗೆಗೂ ಎಷ್ಟು ಕಾರ್ಮಿಕರನ್ನು ನೇಮಕ ಮಾಡಬೇಕು ಎಂದು ಯೋಜನೆ ಸಿದ್ದಗೊಂಡ ನಂತರ ನಿರ್ಧಾರ ಮಾಡಲಾಗುವುದು ಎಂದು ವಿವರಿಸಿದರು.
ಸಮಿತಿ ಸದಸ್ಯ ವಿಜಯ ರಾಮೇಗೌಡ ಮಾತನಾಡಿ, ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎನ್ನುವ ಹೆಗ್ಗಳಿಕೆ ಮಂಡ್ಯಕ್ಕಿದೆ. ಮೂರು ದಶಕದ ಬಳಿಕ ನುಡಿಜಾತ್ರೆಯ ಆತಿಥ್ಯ ವಹಿಸಿಕೊಳ್ಳುವ ಅವಕಾಶ ನಮ್ಮ ಜಿಲ್ಲೆಗೆ ಸಿಕ್ಕಿದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪದಾಧಿಕಾರಿಗಳಾದ ಜಿ.ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ವಿಶೇಷಾಧಿಕಾರಿ ಚಂದ್ರಶೇಖರ್, ಸದಸ್ಯರಾದ ಮಂಗಲ ಎಂ.ಇ. ಶಿವಣ್ಣ, ಬಿ.ಜಿ.ಉಮಾ, ರಮೇಶ್ ಹಿರೇಮರಳಿ, ಕೆ.ಪರಮೇಶ್, ಎಸ್.ಮಂಜು ಇತರರಿದ್ದರು.