ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ : ಯುವಜನರಿಗೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ

matadarara nondani karyakrama photos (1)
Published on

ಮೈಸೂರು: ಯುವಜನರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸುವ ಜತೆಗೆ ನೆರೆಹೊರೆಯವರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕರೆ ನೀಡಿದರು.

ನಗರದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕೇಂದ್ರ ಚುನಾವಣಾ ಆಯೋಗ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಯುವ ಮತದಾರರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ 1 ಲಕ್ಷ ಅರ್ಹ ನವ ಮತದಾರರಿದ್ದು, ಇವರಲ್ಲಿ ಕೇವಲ 17 ಸಾವಿರ ಮಾತ್ರ ನೋಂದಣಿಯಾಗಿದ್ದಾರೆ. ಉಳಿದವರನ್ನು ನೋಂದಣಿ ಮಾಡಿಸಲು ಮತದಾರರ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮತಗಟ್ಟೆ ಅಧಿಕಾರಿಗಳ ಬಳಿ ಅಥವಾ ವೋಟರ್ ಹೆಲ್ಪ್‌ಲೈನ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದರಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿ ಮಾಡಬಹುದು. ಅಲ್ಲದೆ ಮರಣ ಹೊಂದಿದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ. ಒಬ್ಬರು ಕನಿಷ್ಠ 20 ನವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಹಾಗೂ ಮರಣ ಹೊಂದಿರುವ ಕನಿಷ್ಠ 5 ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಹಾಗೆ ನೋಡಿಕೊಳ್ಳಿ ಎಂದರು.

ಪ್ರತಿ ಭಾನುವಾರ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮರಣ ಹೊಂದಿದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವರು. ಮತಗಟ್ಟೆ ಅಧಿಕಾರಿಗಳ ಬಳಿ ಕರಡು ಮತದಾರರ ಪಟ್ಟಿ ಇದ್ದು, ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಿ. ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿದವರಿಗೆ ಚುನಾವಣೆಯಲ್ಲಿ ಮತದಾನ ಮಾಡಿಸಲು ನೇರವಾಗಿ ಮನೆಗೆ ಹೋಗಿ ಮತದಾನ ಮಾಡಿಸುವ ವ್ಯವಸ್ಥೆ ಬರಲಿರುವುದರಿಂದ ಅಂಗವಿಕಲತೆಯ ಮಾಹಿತಿಯನ್ನು ನೋಂದಣಿ ಮಾಡಿ ಎಂದು ತಿಳಿಸಿದರು.

ನನ್ನ ಒಂದು ಮತದಾನದಿಂದ ಬದಲಾವಣೆ ಅಸಾಧ್ಯ ಎಂಬ ನಿರಾಶಾ ಭಾವನೆ ಇರಬಾರದು. ಪ್ರತಿಯೊಬ್ಬರಲ್ಲಿಯೂ ಆಶಾ ಮನೋಭಾವ ಇರಬೇಕು. ಒಂದೊಂದು ಮತವು ಅತ್ಯಮೂಲ್ಯವಾದದ್ದು. ಮತದಾನದಿಂದ ರಾಜ್ಯ ಹಾಗೂ ದೇಶ ಸದೃಢವಾಗಲು ಕಾರಣರಾಗುತ್ತೀರಿ. ಹಾಗಾಗಿ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net