28ರೊಳಗೆ ಬೇಸಿಗೆ ಹಂಗಾಮು ಬೆಳೆ ನೋಂದಾಯಿಸಿ

23-pnp 1
ಪಾಂಡವಪುರದ ಕೃಷಿ ಇಲಾಖೆ ಕಚೇರಿಯಲ್ಲಿ ಕೃಷಿಕ್ ಸಮಾಜದ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ಸಭೆ ನಡೆಯಿತು. ಕೃಷಿ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್, ಎಚ್.ಮಂಜು, ಆರ್.ಚನ್ನಕೇಶವ, ಉಮಾಶಂಕರ್ ಇದ್ದರು.
Published on

ಪಾಂಡವಪುರ: ಬೇಸಿಗೆ ಹಂಗಾಮು ಬೆಳೆಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸಲು ಫೆ.28ರೊಳಗೆ ಕರ್ನಾಟಕ ರೈತ ಸುರಕ್ಷಾ ಮತ್ತು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ನೋಂದಣಿ ಮಾಡಿಸಬೇಕು ಎಂದು ಕೃಷಿಕ್ ಸಮಾಜದ ತಾಲೂಕು ಅಧ್ಯಕ್ಷ ಆರ್.ಚನ್ನಕೇಶವ ಮನವಿ ಮಾಡಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕೃಷಿಕ್ ಸಮಾಜದ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದು ಅಂತರ್ಜಲ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಭತ್ತ ಬೆಳೆದಿರುವ ರೈತರು ಎಕರೆಗೆ 596 ರೂ., ರಾಗಿಗೆ 308 ರೂ. ಹಾಗೂ ಟೊಮ್ಯಾಟೊ ಬೆಳೆಗೆ 2863 ರೂ. ಪಾವತಿಸಿ ವಿಮೆ ಮಾಡಿಸಿಕೊಳ್ಳುವ ಮೂಲಕ ನಷ್ಟದ ಪ್ರಮಾಣ ಕಡಿಮೆ ಮಾಡಿಕೊಳ್ಳಬೇಕು ಎಂದರು.

ಕೃಷಿ ಇಲಾಖೆ ಕಚೇರಿ ಖಾಸಗಿ ಕಟ್ಟಡದಲ್ಲಿದ್ದು, ಕಚೇರಿ ನಿರ್ಮಾಣಕ್ಕಾಗಿ ತಾಲೂಕಿನ ಹರಳಹಳ್ಳಿ ಬಳಿ ಸರ್ಕಾರ ನಾಲ್ಕು ಗುಂಟೆ ಜಮೀನು ಮಂಜೂರು ಮಾಡಿದೆ. ಇದರ ಅಳತೆ ಮತ್ತು ಹದ್ದುಬಸ್ತು ಕಾರ್ಯ ಪೂರ್ಣಗೊಂಡಿದ್ದು, ಶೀಘ್ರ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು. ಈ ಹಿಂದೆ ಕೃಷಿ ಇಲಾಖೆ ಕಚೇರಿ ಇದ್ದ ನಿವೇಶನಕ್ಕೆ ಸಂಬಂಧಿಸಿದಂತೆ ಕೆಲ ತಾಂತ್ರಿಕ ತೊಂದರೆ ಇರುವ ಕಾರಣ ಸರ್ಕಾರ ಹೊಸದಾಗಿ ಮಂಜೂರು ಮಾಡಿರುವ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.

ಪಿಎಸ್‌ಎಸ್‌ಕೆ ಷೇರುದಾರರ ಸಮಿತಿ ರಚನೆ ಅಗತ್ಯ: ಪಿಎಸ್‌ಎಸ್‌ಕೆ ಕಾರ್ಖಾನೆಗೆ ಸೇರಿದ ಆಸ್ತಿ ನೂರಾರು ಕೋಟಿ ಇದ್ದು, ಇದರ ರಕ್ಷಣೆ ಮತ್ತು ಕಾರ್ಖಾನೆಗೆ ಸಂಬಂಧಿಸಿದ ಪ್ರಕರಣ ನೋಡಿಕೊಳ್ಳಲು ಸರ್ಕಾರ ಪಿಎಸ್‌ಎಸ್‌ಕೆ ಕಾರ್ಖಾನೆ ಷೇರುದಾರರ ಸಮಿತಿ ರಚಿಸಬೇಕು. ಎಂಆರ್‌ಎನ್ ಸಂಸ್ಥೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದ್ದು, ಇದರ ಆಡಳಿತ ಮಂಡಳಿ ಕಾರ್ಖಾನೆ ಆಸ್ತಿ ಮತ್ತು ಇತರ ಜವಾಬ್ದಾರಿಗಳನ್ನು ನಿಭಾಯಿಸುತ್ತಿಲ್ಲ. ಹೀಗಾಗಿ ಸಹಕಾರಿ ಒಡೆತನ ಸ್ಥಾಪನೆಯಾಗಿ ಬಹುಕೋಟಿ ಆಸ್ತಿ ರಕ್ಷಣೆಗಾಗಿ ಸರ್ಕಾರ ತಕ್ಷಣ ಸಮಿತಿ ರಚನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್ ಮಾತನಾಡಿ, ರೈತರ ಹಿತದೃಷ್ಟಿಯಿಂದ ಸರ್ಕಾರ ಜಾರಿಗೆ ತಂದಿರುವ ವಿಮಾ ಯೋಜನೆಯ ಸೌಲಭ್ಯವನ್ನು ರೈತರು ಪಡೆದುಕೊಳ್ಳಬೇಕು. ತಾಲೂಕಿನ ನಾರಾಯಣಪುರ, ಟಿ.ಎಸ್.ಛತ್ರ, ಡಿಂಕಾ, ಅರಳಕುಪ್ಪೆ, ಕಟ್ಟೇರಿ, ಬಳಘಟ್ಟ, ಕೆ.ಬೆಟ್ಟಹಳ್ಳಿ, ಹಿರೇಮರಳಿ, ಕನಗನಮರಡಿ, ದೊಡ್ಡಬ್ಯಾಡರಹಳ್ಳಿ, ಕೆನ್ನಾಳು, ಚಿಕ್ಕಾಡೆ, ಕ್ಯಾತನಹಳ್ಳಿ, ಹರವು ಮತ್ತು ಜಕ್ಕನಹಳ್ಳಿ ಸೇರಿದಂತೆ 15 ಗ್ರಾಮ ಪಂಚಾಯಿತಿಗಳ ರೈತರು ವಿಮೆ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಎಚ್.ಸಿ.ಮಂಜು, ಕೃಷಿಕ್ ಸಮಾಜದ ಡಿಂಕಾ ಡಿ.ಆರ್.ಪುಟ್ಟರಾಜು, ಎನ್.ಕೆ.ಉಮೇಶ್, ನ್ಯಾಮನಹಳ್ಳಿ ದೇವರಾಜು, ಪುರಸಭೆ ಸದಸ್ಯ ಉಮಾಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net