ಯುವನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿ

BLY-5-4
ಪ್ರಶಾಂತ್ ಕುಮಾರ್ ಮಿಶ್ರಾ
Published on

ಬಳ್ಳಾರಿ: ಜಿಲ್ಲೆಯಲ್ಲಿ 2023ರಲ್ಲಿ ತೇರ್ಗಡೆಗೊಂಡ ಅರ್ಹ ಪದವೀಧರರು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳು ಯುವನಿಧಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಯುವನಿಧಿ ಯೋಜನೆಯಡಿ ನೋಂದಣಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆಯಡಿಲ್ಲಿ ಪದವಿ ಪಾಸಾದವರಿಗೆ 3 ಸಾವಿರ ರೂ. ಮತ್ತು ಡಿಪ್ಲೋಮಾ ಪಾಸಾದವರಿಗೆ 1500 ರೂ.ಗಳನ್ನು ನೀಡುವ ಯೋಜನೆಗೆ ಜ.12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಯುವನಿಧಿ ಯೋಜನೆಯಡಿ ಲಾಭ ಪಡೆಯಲು ಜಿಲ್ಲೆಯ ಅರ್ಹತೆ ಹೊಂದಿರುವ ನಿರುದ್ಯೋಗ ಪದವೀಧರರು ಮತ್ತು ಡಿಪ್ಲೋಮಾ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಅರ್ಹತೆ ಹೊಂದಿರುವ ನಿರುದ್ಯೋಗ ಪದವೀಧರರು ಮತ್ತು ಡಿಪ್ಲೋಮಾ ನಿರುದ್ಯೋಗಿಗಳು ಯೋಜನೆಯಿಂದ ವಂಚಿತರಾಗದೆ ಎಲ್ಲರೂ ನೋಂದಾಯಿಸಿಕೊಳ್ಳುವಂತೆ ಎಲ್ಲ ಪದವಿ ಕಾಲೇಜು ಮತ್ತು ಡಿಪ್ಲೋಮಾ ಕಾಲೇಜು ಪ್ರಾಚಾರ್ಯರು ಅಗತ್ಯ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

2023ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯಾ ಕಾಲೇಜಿನ ಪ್ರಾಚಾರ್ಯರು ಯುವನಿಧಿ ಯೋಜನೆಗೆ ಆನ್‌ಲೈನ್‌ನಲ್ಲಿ (ಸೇವಾ ಸಿಂಧು ಪೋರ್ಟಲ್ / ಅಟಲ್ಜೀ ಕೇಂದ್ರ / ಕರ್ನಾಟಕ-1 / ಬಳ್ಳಾರಿ-1 ಮತ್ತು ಇತರೆ ಸೇವಾ ಕೇಂದ್ರ) ಗಳಲ್ಲಿ ಅರ್ಜಿ ಸಲ್ಲಿಸಲು ಸೂಚಿಸಬೇಕು. ಹೆಚ್ಚಿನ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಮಾರ್ಗದರ್ಶನ ಹಾಗೂ ಸಹಕಾರ ನೀಡಬೇಕು. ಅದ್ದಕ್ಕಾಗಿ ಕಾಲೇಜು ಹಂತದಲ್ಲಿ ಮತ್ತು ವಿಶ್ವಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಕ್ಯಾಂಪ್ ಮಾಡಬೇಕು. ಅಲ್ಲದೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಎಸ್‌ಎಂಎಸ್ ಮೂಲಕ 2023ರಲ್ಲಿ ಪದವಿ / ಡಿಪ್ಲೋಮಾ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ತಲುಪುವಂತೆ ಪ್ರಚಾರ ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪಿ.ಎಸ್.ಹಟ್ಟಪ್ಪ ಮಾತನಾಡಿ, 2023ರಲ್ಲಿ ಪದವಿ ಮತ್ತು ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ನಂತರ ಕನಿಷ್ಟ 6 ತಿಂಗಳ ಅವಧಿಯವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೆ ಇರುವವರು, ಯುವನಿಧಿ ಯೋಜನೆಯಡಿ ನೋಂದಾಯಿಸಲು ಅರ್ಹರು ಎಂದು ಮಾಹಿತಿ ನೀಡಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net