‘ಸರಕಾರ’ದ ಬದಲು ರೈತರ ಹೆಸರು ನೋಂದಾಯಿಸಿ

NRD SARKAR MNANVI
Published on

ನರಗುಂದ: ತಾಲೂಕಿನ ವಿವಿಧ ಗ್ರಾಮಗಳ ರೈತರ ಪಹಣಿ ಪತ್ರಿಕೆ ಕಾಲಂ ನಂ. 9ರಲ್ಲಿ ನಮೂದಾಗಿರುವ ‘ಸರಕಾರ’ ಎಂಬ ಪದವನ್ನು ತೆಗೆದು ಮೂಲ ರೈತರ ಹೆಸರನ್ನು ನೋಂದಾಯಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಪರಶುರಾಮ ಕಲಾಲ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಕೆಆರ್​ಎಸ್ ಪಕ್ಷದ ಗದಗ ಜಿಲ್ಲಾಧ್ಯಕ್ಷ ವೀರನಗೌಡ ಮೂಗನೂರ ಮಾತನಾಡಿ, ನರಗುಂದ ತಾಲೂಕಿನ ಹದ್ಲಿ, ಗಂಗಾಪೂರ, ಖಾನಾಪೂರ, ರಡ್ಡೇರನಾಗನೂರ, ಭೈರನಹಟ್ಟಿ ಮುಂತಾದ ಗ್ರಾಮಗಳ 500ಕ್ಕೂ ಅಧಿಕ ರೈತರ ಪಹಣಿ ಪತ್ರಿಕೆಗಳಲ್ಲಿ ‘ಸರಕಾರ’ ಎಂದು ನಮೂದಾಗಿದ್ದು, ರೈತರಿಗೆ ಅನಾನೂಕೂಲತೆ ಉಂಟಾಗಿದೆ. ನೀರಾವರಿ ಬಾಕಿ ಕರ ಪಾವತಿಸಿಲ್ಲವೆಂಬ ಕಾರಣ ನೆಪವೊಡ್ಡಿ 1995ರಿಂದ ರೈತರ ಪಹಣಿ ಪತ್ರಿಕೆಗಳಲ್ಲಿ ‘ಸರಕಾರ’ ಎಂದು ನಮೂದಿಸಲಾಗಿದೆ. ಇದರಿಂದ ತಾಲೂಕಿನ ರೈತರಿಗೆ ಬೆಳೆ ವಿಮೆ, ಬೆಳೆ ಹಾನಿ ಇನ್ನಿತರ ಸೌಲಭ್ಯಗಳು ದೊರೆಯುತ್ತಿಲ್ಲ.

ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ನಿಷ್ಕಾಳಜಿ ತೋರಲಾಗಿದೆ. ನಿಗಧಿತ ಅವಧಿಯೊಳಗೆ ರೈತರ ದಶಕಗಳ ಜ್ವಲಂತ ಸಮಸ್ಯೆಯನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿಕೊಡಬೇಕು, ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.

ಫಾರೂಕ್ ಕಟ್ಟಿಮನಿ, ಬಸವರಾಜ ಅರಗಂಜಿ, ಕೃಷ್ಣಚಾರಿ ವಡವಿ, ರೇಣುಕಾ ನಾಗಾವಿ, ಗಣೇಶ ಗೌಳಿ, ಆಸೀಫ್ ಮಾಲಬಾರ, ಸೋಯೆಲ್ ಪಟೇಲ್, ಇರ್ಶಾನ್ ಮಲಬಾರ, ಕುಮಾರಸ್ವಾಮಿ ಹಿರೇಮಠ, ದಾವಲಸಾಬ್ ಇಮಾಮ್ಾನವರ, ಬಸವರಾಜ ಮಾಳವಾಡ, ಕಲ್ಲಪ್ಪ ಹೂಗಾರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net