ಜನನ, ಮರಣ ನೋಂದಾಯಿಸಿ

DSC_2772-03
Published on

ಚಿತ್ರದುರ್ಗ: ಜಿಲ್ಲೆಯಲ್ಲಿ 2015ರಿಂದ 21ರವರೆಗೆ ಅವಧಿ ಮೀರಿ ಉಳಿದ ಹಳೆಯ 3,205 ಜನನ ಹಾಗೂ 1,115 ಮರಣ ನೋಂದಣಿಗೆ ನಿಯಮಾನುಸಾರ ಕ್ರಮವಹಿಸಲಾಗಿದ್ದು, ಕಾನೂನಾತ್ಮಕವಾಗಿ ಬಗೆಹರಿಸಲು ತೀರ್ಮಾನಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ನಾಗರಿಕ ನೋಂದಣಿ ಪದ್ಧ್ದತಿ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜನನ ಹಾಗೂ ಮರಣ ನೋಂದಣಿ ವಿಚಾರದಲ್ಲಿ ವಿಳಂಬ ಮಾಡದೆಯೇ ಕ್ರಮವಹಿಸಿ. ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ಉತ್ತಮ ಉದ್ದೇಶದಿಂದ ಅಧಿಕಾರಿಗಳು ಮುತುವರ್ಜಿವಹಿಸಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗದೆ ಉಳಿದ ಪ್ರಕರಣಗಳನ್ನು ನ್ಯಾಯಾಲಯದ ಮೂಲಕ ಬಗೆಹರಿಸುತ್ತಿದ್ದಾರೆ. ಲೋಕ ಅದಾಲತ್‌ನಿಂದ ತ್ವರಿತವಾಗಿ ಪರಿಹರಿಸಲು ಜಿಲ್ಲಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಬಿ.ಕೆ.ಗಿರೀಶ ಅವರು ಭರವಸೆ ನೀಡಿದ್ದಾರೆ. ಇದರಿಂದಲೂ ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.

ಹಳೆಯ ಜನನ-ಮರಣ ನೋಂದಣಿಯ ಸ್ಕ್ಯಾನಿಂಗ್ ಪ್ರಕ್ರಿಯೆ ಚುರುಕುಗೊಳ್ಳಬೇಕು. ಜಿಲ್ಲೆಯ ಆಯಾ ತಾಲೂಕಿನ ತಹಶೀಲ್ದಾರರು ಈ ಕುರಿತು ಗಮನಹರಿಸಬೇಕು. ಯಂತ್ರಗಳು ಹಾಗೂ ಮಾನವ ಸಂಪನ್ಮೂಲ ಬಳಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು.

ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಳೆಯ ಎಂಆರ್‌ಸಿ ತಂತ್ರಾಂಶದಿಂದ ಜನನ ನೋಂದಣಿಯನ್ನು ಇ-ಜನ್ಮ ತಂತ್ರಾಂಶಕ್ಕೆ ವರ್ಗಾಹಿಸದ ಕಾರಣ 15,085 ಬಾಕಿ ಇರುವುದು ಕಂಡುಬಂದಿತ್ತು. ಸರಿಪಡಿಸಿದ ನಂತರ 3,205 ಬಾಕಿ ಉಳಿದಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮನಾಯ್ಕ್ ಮಾಹಿತಿ ನೀಡಿದರು.

ಜನನ ನೋಂದಣಿಗೆ ಪೋಷಕರ ಆಧಾರ್ ಕಾರ್ಡ್ ಕಡ್ಡಾಯವಲ್ಲ. ಕಡ್ಡಾಯವೆಂದು ತಿಳಿದು ಗ್ರಾಮೀಣ ಪ್ರದೇಶದ 1,700 ಜನನ, 122 ಮರಣ, ನಗರ ಪ್ರದೇಶದ 1,505 ಜನನ, 993 ಮರಣ ನೋಂದಣಿ ಬಾಕಿಯಿದೆ. 2022ರಲ್ಲಿ ಜಿಲ್ಲಾದ್ಯಂತ 24,913 ಜನನ, 17,099 ಮರಣ ನೋಂದಣಿಯಾಗಿವೆ. ಹೀಗಾಗಿ ಜನನ ದರ ಪ್ರಮಾಣ 14.66 ಹಾಗೂ ಮರಣ ದರ ಪ್ರಮಾಣ 9.05 ಇದೆ ಎಂದು ಮಾಹಿತಿ ನೀಡಿದರು.

ಜಿಪಂ ಯೋಜನಾ ನಿರ್ದೇಶಕ ಕೆ.ಎನ್. ಮಹಾಂತೇಶಪ್ಪ, ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್‌ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್ ಇತರರಿದ್ದರು.

ಕಟಾವು ಪ್ರಯೋಗ ಪೂರ್ಣಗೊಳಿಸಿ

ಅಧಿಕಾರಿಗಳು ಮುಂಗಾರು ಹಂಗಾಮಿನ 2ನೇ ಹಂತದ ಬೆಳೆ ಕಟಾವು ಪ್ರಯೋಗ ಪೂರ್ಣಗೊಳಿಸಿ ವರದಿ ನೀಡಿ. ನಿಗದಿತ ಸಮಯಕ್ಕೆ ಹಿಂಗಾರು ಬೆಳೆ ಕಟಾವು ಪ್ರಯೋಗ ಪೂರ್ಣಗೊಳಿಸಿ ಎಂದು ಇ.ಬಾಲಕೃಷ್ಣ ಹೇಳಿದರು.

ಕೃಷಿ ಅಂಕಿ-ಅಂಶ ಆಧಾರಿಸಿ ಕೇಂದ್ರ ಸರ್ಕಾರ ಬೆಳೆ ನಾಶ, ವಿಮೆ ಸೇರಿ ಇತರೆ ಪರಿಹಾರ ರೈತರಿಗೆ ನೀಡಲಾಗುತ್ತದೆ. ಆದ್ದರಿಂದ ನಿಖರ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಬೇಕು. ಹಿಂಗಾರು ಹಂಗಾಮಿನ ಕಡಲೆ, ಸೂರ್ಯಕಾಂತಿ ಸೇರಿ ಹಲವು ಬೆಳೆಗಳು ಬಹುಬೇಗ ಕಟಾವಿಗೆ ಬರುತ್ತವೆ. ಹೀಗಾಗಿ ಕಟಾವು ಪ್ರಯೋಗ ಪೂರ್ಣಗೊಳಿಸಿ ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net