ಎಸ್ಸಿ-ಮಾದಿಗ ಎಂದು ನೋಂದಣಿ ಮಾಡಿಸಿ

Published on

ಮಾನ್ವಿ: ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇಗಾಗಿ ಮನೆಗೆ ಬಂದಾಗ ಸಮುದಾಯದವರು ಪರಿಶಿಷ್ಟ ಜಾತಿ-ಮಾದಿಗ ಎಂದು ನಿಖರವಾಗಿ ನೋಂದಾಯಿಸಬೇಕು ಎಂದು ಮಾದಿಗ ಜಾಗೃತಿ ಯುವ ವೇದಿಕೆ ತಾಲೂಕು ಸಂಚಾಲಕ ಯಲ್ಲಪ್ಪ ಬಾದರದಿನ್ನಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.6 ರಿಂದ 26 ರವರೆಗೆ ರಾಜ್ಯಾದ್ಯಂತ ಮಾದಿಗ ಸಮುದಾಯದ ಜಾತಿ ಸಮೀಕ್ಷೆ ನಡೆಯಲಿದ್ದು, ಪರಿಶಿಷ್ಟ ಜಾತಿ ಹಾಗೂ ಉಪಜಾತಿಗಳ ಜನಸಂಖ್ಯೆ, ಕುಟುಂಬಗಳ ಸಂಖ್ಯೆ, ಶಿಕ್ಷಣ, ವೃತ್ತಿ, ವಾಸಸ್ಥಳ, ಆದಾಯ, ಭೂಮಿಯ ಒಡೆತನ, ಸರ್ಕಾರಿ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯ ವಿವಿಧ ಅಂಶಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯಬೇಕು. ಈ ಕುರಿತು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಜಾರಿಗೆ ಪರಮಾಧಿಕಾರ ನೀಡಿದೆ. ತೆಲಂಗಾಣ ಮತ್ತು ಆಂಧ್ರ ಸರ್ಕಾರ ಒಳಮೀಸಲಾತಿ ಕಾಯ್ದೆ ಅಂಗೀಕರಿಸಿವೆೆ. ರಾಜ್ಯದಲ್ಲಿ ಸದಾಶಿವ ಆಯೋಗ, ಕಾಂತರಾಜ ವರದಿ ಹಾಗೂ ಮಾಧುಸ್ವಾಮಿ ಸಮಿತಿ ವರದಿ ಇದ್ದರೂ ರಾಜ್ಯ ಸರ್ಕಾರ ನೂತನವಾಗಿ ರಚಿಸಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಕಮಿಟಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಆದರೆ, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಅವರು ಆದಿ ಆಂಧ್ರ, ಆದಿದ್ರಾವಿಡ, ಆದಿ ಕರ್ನಾಟಕ, ಎಸ್ಸಿ ಹರಿಜನ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿವೆ. ಆದ್ದರಿಂದ ರಾಜ್ಯ ಸರ್ಕಾರ ಮರು ಸಮೀಕ್ಷೆ ಕೈಗೊಂಡಿದ್ದು, ಸೂಕ್ತ ಮಾಹಿತಿ ನೀಡಬೇಕೆಂದರು. ಪ್ರಮುಖರಾದ ಬಸವರಾಜ ನಕ್ಕುಂದಿ, ಪರಶುರಾಮ ಬಾಗಲವಾಡ, ಯಮುನಪ್ಪ ಜಾಗೀರಪನ್ನೂರು, ಪಿ.ರವಿಕುಮಾರ ವಕೀಲ, ಯಲ್ಲಪ್ಪ ಸೀಕಲ್, ರಮೇಶ ಗವಿಗಟ್ಟ, ಶಾಂತಕುಮಾರ ಮುಷ್ಟೂರು, ರವಿ ಗಟ್ಟು ಬಿಚ್ಚಾಲಿ, ವೀರೇಶ ಜೀನೂರು, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net