ಆಟೋ ವಿನ್ಯಾಸ ನಿಯಮ ಉಲ್ಲಂಘನೆ: ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ

Regional Transport Authority Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ 1,327 ಆಪೆ ಆಟೋಗಳು ಸಂಚಾರ ನಡೆಸುತ್ತಿವೆ. ಆದರೆ ಸೀಟುಗಳನ್ನು ಹೆಚ್ಚಿಸುವ ಸಲುವಾಗಿ ಆಟೋಗಳ ವಿನ್ಯಾಸ ಮಾರ್ಪಾಡು ಮಾಡುತ್ತಿರುವುದು ಹಾಗೂ ತಮ್ಮ ವ್ಯಾಪ್ತಿ ಮೀರಿ ಸಂಚಾರ ನಡೆಸುತ್ತಿರುವುದು ಕಂಡುಬಂದಿರುತ್ತದೆ. ಇವುಗಳು ಸಂಚಾರ ನಿಯಮ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ತಮ್ಮ ಆಪೆ ಆಟೋಗಳನ್ನು ಮಾರ್ಪಾಡು ಮಾಡಿಕೊಂಡಿರುವ 154 ಆಟೋ ಮಾಲೀಕರ ವಿರುದ್ಧ 11.70 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಆದಾಗ್ಯೂ ನಿಯಮಗಳನ್ನು ಮೀರಿದರೆ ಕ್ರಮ ಕೈಗೊಳ್ಳಿ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಸಾರ್ವಜನಿಕರು ಹಾಗೂ ಪ್ರಯಾಣಿಕರ ಹಿತಾಸಕ್ತಿಯಿಂದ ಸಂಚಾರ ನಿಯಮ ರೂಪಿಸಿದ್ದು, ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದರು.

ನಿವೇಶನ ಇದ್ದು ಮನೆಯಿಲ್ಲದ ಆಟೋ ಚಾಲಕರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹಾಗೂ ನಿವೇಶನ ಮತ್ತು ಮನೆ ಎರಡೂ ಇಲ್ಲದ ಆಟೋ ಚಾಲಕರು ರಾಜೀವ್ ಗಾಂಧಿ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿ. ಸರ್ಕಾರ ನೀಡುವ ಯೋಜನೆಗ ಆಟೋ ಚಾಲಕರು ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಸದುಪಯೋಗ ಪಡಿಸಿಕೊಳ್ಳಬಹುದು. ಅಟೋ ರಿಕ್ಷಾ ಚಾಲಕರ ಸಂಘದ ಮಾಲೀಕರು 2017 ರಲ್ಲಿ ಬಾಡಿಗೆ ದರವನ್ನು ಪರಿಷ್ಕರಣೆಯಾಗಿತ್ತು. ಪೆಟ್ರೋಲ್, ಡೀಸಲ್ ದರ ಹಾಗೂ ಆಟೋ ರಿಕ್ಷಾ ಬಿಡಿ ಭಾಗಗಳ ದರ ಹೆಚ್ಚಾಗಿದ್ದು, ಬಾಡಿಗೆ ದರ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ತಾಂತ್ರಿಕ ಸಮಿತಿ ರಚಿಸಿ ವರದಿ ಪಡೆದು ಸೂಕ್ತ ದರ ನಿಗದಿ ಮಾಡಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಪ್ರಾದೇಶಿಕ ಸಾರಿಗೆ ಇಲಾಖೆ ಒಳಗೊಂಡಂತೆ ಶೀಘ್ರವೇ ಒಂದು ತಂಡ ರಚಿಸಿ ಎಫ್‌ಸಿ ಅವಧಿ ಮೀರಿ ಸಂಚಾರ ನಡೆಸುತ್ತಿರುವ ಹಾಗೂ ಮಾರ್ಪಾಡು ಮಾಡಿರುವ ಆಟೋ ರಿಕ್ಷಾಗಳನ್ನು ಹಿಡಿದು ಸೀಜ್ ಮಾಡಲಾಗುವುದು. ಪ್ಯಾಸೆಂಜರ್ ಆಟೋ ಚಾಲಕರು, ನಿಲ್ದಾಣಗಳಲ್ಲಿ ದರ ಸೂಚ್ಯಂಕ ಫಲಕವನ್ನು ಅಳವಡಿಸಬೇಕು. ಅಂತೆಯೇ ಪ್ರಯಾಣಿಕರು ಸಂಚರಿಸುವ ಸಂದರ್ಭದಲ್ಲಿ ಮೀಟರ್ ಹಾಕಬೇಕು ಹಾಗೂ ನಿಗದಿತ ದರವನ್ನು ಮಾತ್ರ ಪಡೆಯಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಪೌರಾಯುಕ್ತೆ ಪಂಪಶ್ರೀ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಸಂತೋಷ್, ಚಂದ್ರಶೇಖರ್, ಜಿಲ್ಲಾ ಆಟೋ ಚಾಲಕರ ಅಧ್ಯಕ್ಷ ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net