

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆ.31 ಹಾಗೂ ಸೆಪ್ಟೆಂಬರ್ 1ರಂದು ಪ್ರಾದೇಶಿಕ ಸುತ್ತಿನ ಕಲ್ಪಿತ ಸಂಸತ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ ಅಂಗ ಸಂಸ್ಥೆಯಾದ ಯಂಗ್ ಇಂಡಿಯನ್ಸ್ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ನಾಗರಾಜ ನಾಯಕ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಆನ್ಲೈನ್ ಮೂಲಕ ಕೆಲವು ವಿಷಯಗಳ ಮೇಲೆ ಪ್ರಬಂಧಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳನ್ನು ಪ್ರಾದೇಶಿಕ ಸುತ್ತಿಗೆ ಆಯ್ಕೆ ಮಾಡಲಾಗಿದೆ. 213 ವಿದ್ಯಾರ್ಥಿಗಳು ಹುಬ್ಬಳ್ಳಿ ಪ್ರಾದೇಶಿಕ ಸುತ್ತಿಗೆ ಆಯ್ಕೆಯಾಗಿದ್ದಾರೆ. ನೋಯಿಡಾ, ನಾಸಿಕ್, ರಾಜಕೋಟ, ರಾಂಚಿ, ಬೆಂಗಳೂರು, ಚೆನ್ನೈ, ವಿಶಾಖಪಟ್ಟಣಂನಲ್ಲಿ ಪ್ರಾದೇಶಿಕ ಸುತ್ತಿನ ಸ್ಪರ್ಧೆಗಳು ನಡೆಯಲಿವೆ ಎಂದರು.
ಹುಬ್ಬಳ್ಳಿಯಲ್ಲಿ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ, ಮಹಾರಾಷ್ಟ್ರದ ಕೊಲ್ಹಾಪುರ ಹಾಗೂ ಗೋವಾದ ವಿದ್ಯಾರ್ಥಿಗಳು ಭಾಗವಹಿಸುವರು. ಪ್ರಾದೇಶಿಕ ಸುತ್ತಿನಿಂದ 15 ವಿದ್ಯಾರ್ಥಿಗಳು ರಾಷ್ಟ್ರೀಯ ಸುತ್ತಿಗೆ ಸ್ಪರ್ಧಿಸಲು ಅವಕಾಶ ಪಡೆಯುವರು. ಪ್ರಾದೇಶಿಕ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಬಹುಮಾನ ಹಾಗೂ ಪ್ರಮಾಣಪತ್ರ ಪಡೆಯುವರು. ಆ. 31ರಂದು ಬೆಳಗ್ಗೆ 9ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಎರಡೂ ದಿನ ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರಿಗೆ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು. ಉಜ್ವಲ ಸಿಂಘಿ, ಲೇಖಾ ಖೋನಾ, ಮಿಥಿಲಾ ಸುರೇಬಾನ, ಕೋಮಲ ಷಾ ಇದ್ದರು.