ಮುಜರಾಯೇತರ ದೇಗುಲಗಳ ನೋಂದಣಿ ಕಡ್ಡಾಯ: ಎಸಿ ಡಾ.ನಾಗರಾಜ್

Dr.H.L. Nagaraj
Published on

ಚಿಕ್ಕಮಗಳೂರು: ಮುಜರಾಯಿ ಇಲಾಖೆ ಪಟ್ಟಿಯಲ್ಲಿ ಸೇರದ ಜಿಲ್ಲೆಯ ಎಲ್ಲ ದೇವಾಲಯಗಳು ತಿಂಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್ ತಿಳಿಸಿದರು.

ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಅಧಿನಿಯಮ 2011ರ ಪ್ರಕಾರ ಕಲಂ 53 ರಡಿ ಆಯಾ ಉಪ ವಿಭಾಗಾಧಿಕಾರಿ ವ್ಯಾಪ್ತಿಯಲ್ಲಿ ಬರುವ ಎಲ್ಲ ದೇವಾಲಯಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಆಯಾ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ, ಟ್ರಸ್ಟ್, ಚಾರಿಟಿ ಅಥವಾ ಯಾವುದೇ ಪ್ರಭಾರದಲ್ಲಿರುವ ವ್ಯಕ್ತಿ ಸಹಾಯಕ ಆಯುಕ್ತರಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಈ ಕುರಿತು ತಹಸೀಲ್ದಾರರಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಮಾಹಿತಿ ನೀಡದಿದ್ದರೆ ನೋಟಿಸ್:
ದೇವಾಲಯದ ನೋಂದಣಿ ಮಾಡಿಸುವವರು ದೇವಸ್ಥಾನದ ವಿವರ, ಚೆಕ್ಕುಬಂದಿ ಮತ್ತಿತರ ಮಾಹಿತಿಗಳನ್ನು ಬಿಳಿ ಹಾಳೆಯಲ್ಲಿ ಬರೆದುಕೊಟ್ಟರೂ ಅದನ್ನು ನೋಂದಣಿ ಮಾಡಲಾಗುತ್ತದೆ. ಒಂದು ತಿಂಗಳಲ್ಲಿ ನೋಂದಣಿ ಮಾಡಿಸದಿದ್ದರೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಆಯಾ ಗ್ರಾಮ ವ್ಯಾಪ್ತಿಯ ದೇವಸ್ಥಾನಗಳ ಮಾಹಿತಿ ಪಡೆದು ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು. ದೇವಾಲಯದ ಎಲ್ಲ ವ್ಯವಹಾರಗಳು ಸಮರ್ಪಕವಾಗಿದ್ದರೆ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಹಣ ದುರುಪಯೋಗದ ದೂರುಗಳು ಬಂದಲ್ಲಿ ಮಧ್ಯಪ್ರವೇಶಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರತಿ ತಿಂಗಳು ವರದಿ ನೀಡಬೇಕು:
ನೋಂದಾಯಿಸಲ್ಪಟ್ಟ ದೇವಸ್ಥಾನಗಳು ಪ್ರತಿ ತಿಂಗಳ 5ರೊಳಗೆ ನಿಗದಿತ ನಮೂನೆಯಲ್ಲಿ ಪ್ರಗತಿ ವರದಿಯನ್ನು ಆಯಾ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು. ನೋಂದಣಿಗೆ ಅರ್ಜಿ ಸಲ್ಲಿಸಿದ ದೇವಾಲಯಗಳ ಪೂರ್ವಾಪರ, ಸರ್ವೇ ನಂಬರ್ ಮಾಹಿತಿಯನ್ನು ಮುಜರಾಯಿ ಇಲಾಖೆ ಪಟ್ಟಿಯಲ್ಲಿ ಸೇರದ ದೇವಾಲಯಗಳು ಕಡ್ಡಾಯವಾಗಿ ಕೊಡಬೇಕು ಎಂದು ಅವರು ತಿಳಿಸಿದರು.

2015ರಲ್ಲೇ ಸರ್ಕಾರದ ಸುತ್ತೋಲೆ:
ದೇವಾಲಯಗಳನ್ನು ನೋಂದಣಿ ಮಾಡಿಸಲು 2015ರಲ್ಲೇ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಇದುವರೆಗೆ ಯಾವುದೇ ದೇವಸ್ಥಾನಗಳು ನೋಂದಣಿ ಮಾಡಿಸಿಲ್ಲ. ದೇವಸ್ಥಾನಗಳಿಗೆ ಸಂಬಂಧಿಸಿದ ಸಮಿತಿ, ಟ್ರಸ್ಟ್‍ಗಳನ್ನು ಕೆಲವೆಡೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದೆಯಾದರೂ ಈಗಿನ ಸೂಚನೆಯಂತೆ ನೋಂದಣಿ ಮಾಡಿಸಿದಲ್ಲಿ ಸಮುದಾಯದ ಹಿತದೃಷ್ಟಿಯಿಂದ ಆಸ್ತಿ ದುರುಪಯೋಗ ಮತ್ತಿತರ ಅಕ್ರಮ ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮನೆ ಪೂಜೆಗೆ ವಿನಾಯಿತಿ:
ಮನೆಗಳಲ್ಲಿಯೇ ಪೂಜೆ ನಡೆಸುತ್ತಿದ್ದು, ಹೊರಗಿನವರು ಅಲ್ಲಿಗೆ ಬಂದು ಹೋಗುತ್ತಿದ್ದರೂ ಅದು ಖಾಸಗಿ ದೇವಾಲಯವಾಗುವುದಿಲ್ಲ. ಸಮುದಾಯಿಕ ಎನಿಸುವ ದೇವಸ್ಥಾನಗಳು, ಇಬ್ಬರು ಮತ್ತು ಅದಕ್ಕಿಂತ ಹೆಚ್ಚು ಜನರ ಪಾಲುದಾರಿಕೆ ಇದ್ದರೆ ನೋಂದಣಿ ಮಾಡಿಸುವುದು ಅಗತ್ಯ. ದೇವಸ್ಥಾನಗಳಲ್ಲಿ ಚಿನ್ನಾಭರಣ ಮತ್ತಿತರ ಆಸ್ತಿ ಹೊಂದಿದ್ದರೂ ಅದರ ನಿಯಂತ್ರಣ, ಆಸ್ತಿಗಳ ಮಾಹಿತಿ ನೀಡಬೇಕು. ಅವುಗಳ ಬಗ್ಗೆ ವಿಡಿಯೋ ದಾಖಲೀಕರಣ ಮಾಡಲಾಗುತ್ತದೆ. ಬ್ಯಾಂಕ್ ಖಾತೆ, ನಿಗದಿತ ಲೆಕ್ಕ ತಪಾಸಣೆ, ದೇವಸ್ಥಾನದಲ್ಲಿ ಲಭ್ಯವಿರುವ ಸೇವೆಗಳು, ದರ ಮತ್ತಿತರ ಮಾಹಿತಿಯನ್ನು ಅನುಬಂಧ 1ರಿಂದ 5ರವರೆಗಿನ ಕಲಂಗಳಲ್ಲಿ ಭರ್ತಿ ಮಾಡಿ ನೀಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net