ರೈತರ ಆಸ್ತಿಯಲ್ಲಿ ‘ವಕ್ಫ್’ ನಮೂದು ವಿಚಾರ, ಸಚಿವ ಎಂ.ಬಿ. ಪಾಟೀಲರಿಗೆ ವಿಜುಗೌಡ ಪ್ರಶ್ನೆ, ಲೋಪ ಸರಿಪಡಿಸಿದ ಆದೇಶ ಎಲ್ಲಿ?

VIJUGOUDA PATIL PRESS MEET WOKF
ವಿಜಯಪುರ ನಗರದಲ್ಲಿ ವಿಜುಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ರೈತರು ಮತ್ತು ಬಿಜೆಪಿ ಮುಖಂಡರಿದ್ದಾರೆ.
Published on

ವಿಜಯಪುರ: ಹೊನವಾಡ ಗ್ರಾಮದಲ್ಲಿ ರೈತರ ಜಮೀನುಗಳನ್ನು ವಕ್ಫ್‌ಗೆ ತಪ್ಪಾಗಿ ಸೇರ್ಪಡೆಯಾಗಿದೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಆ ಬಗ್ಗೆ ತಿದ್ದುಪಡಿ ಮಾಡಿರುವ ಆದೇಶ ಹೊರಡಿಸಲಿ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಆಗ್ರಹಿಸಿದರು.

ಈಗಾಗಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸಚಿವ ಎಂ.ಬಿ. ಪಾಟೀಲರು, ಹೊನವಾಡದಲ್ಲಿ 1200 ಎಕರೆ ಪೈಕಿ 11 ಎಕರೆ ಮಾತ್ರ ವಕ್ಫ್ ಆಸ್ತಿ ಇದ್ದು, ಉಳಿದ ಭೂಮಿ ರೈತರದ್ದು. ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ಬಿಟ್ಟು ಕೊಡಲ್ಲ ಎಂದ್ದಿದ್ದಾರೆ. ಅಲ್ಲದೇ, 1974 ರಲ್ಲಿ ಹೊನವಾಡ ಗ್ರಾಮದ ನೂರಾರು ಎಕರೆ ಭೂಮಿ ವಕ್ಫ್ ಗೆಜೆಟ್‌ನಲ್ಲಿ ತಪ್ಪಾಗಿ ನಮೂದಾಗಿತ್ತು. ನಂತರ 1977 ರಲ್ಲಿ ಗೆಜೆಟ್ ನಿಂದ ಆ ಜಮೀನುಗಳನ್ನು ಕೈ ಬಿಡಲಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಗೆಜೆಟ್‌ನಿಂದ ತೆಗೆದ ಕುರಿತು ಸಚಿವರು ಆದೇಶ ಪ್ರತಿ ನೀಡಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಗೆಜೆಟ್ ನೋಟಿಫಿಕೇಶನ್‌ನಲ್ಲಿ ತಪ್ಪಾಗಿ ನಮೂದಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಇಷ್ಟು ದಿನ ಸಚಿವರು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ ವಿಜುಗೌಡರು, ಹೊನವಾಡದಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದ ವಿವಾದ ಇನ್ನೂ ಬಗೆ ಹರಿದಿಲ್ಲ. ನನಗಿರುವ ಮಾಹಿತಿ ಪ್ರಕಾರ 1445 ಎಕರೆ ವಕ್ಫ್ ಗೆ ಸೇರ್ಪಡೆಯಾಗಿದೆ. ಬೇರೆ ಗ್ರಾಮಗಳ ರೈತರಿಗೆ ನೊಟೀಸ್ ನೀಡಲಾಗಿದೆ. ಹೀಗಾಗಿ ಹೊನವಾಡದ ರೈತರಿಗೂ ದಿಗಿಲು ಶುರುವಾಗಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕು. ಅದನ್ನು ಬಿಟ್ಟು ರೈತರ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕೆಂದರು.

ವಕ್ಫ್‌ನಲ್ಲಿ ಎಷ್ಟು ಆಸ್ತಿ ಉಳಿದಿದೆ? ಎಷ್ಟು ಮಾರಿಕೊಂಡಿದ್ದಾರೆ? ಎಂಬುದೇ ಸ್ಪಷ್ಟವಿಲ್ಲ. ಬಹುತೇಕರು ಆಸ್ತಿ ವಿವರವೇ ನೀಡಲ್ಲ. ಖುದ್ದು ಎಂ.ಬಿ. ಪಾಟೀಲರೇ ತಮ್ಮ ಆಸ್ತಿ ಘೋಷಣೆ ಸ್ಪಷ್ಟವಾಗಿ ಮಾಡಿಕೊಂಡಿಲ್ಲ. ಎಂ.ಬಿ. ಪಾಟೀಲರದ್ದು 40 ಎಕರೆ ಜಮೀನು ಕಣಮುಚನಾಳದಲ್ಲಿ ಇದೆ. ಕೇವಲ ರೈತರ ಆಸ್ತಿ ವಕ್ಫ್‌ಗೆ ಹೋಗುತ್ತದೆ. ರಾಜಕಾರಣಿಗಳ ಆಸ್ತಿ ಏಕೆ ಹೋಗಲ್ಲ? ಸತತ ನಾಲ್ಕು ಬಾರಿ ತಿಕೋಟಾ ಹಾಗೂ ಬಬಲೇಶ್ವರ ಶಾಸಕರಾಗಿರೋ ಎಂ.ಬಿ. ಪಾಟೀಲಗೆ ಇಷ್ಟು ದಿನ ಈ ಸಮಸ್ಯೆ ಕಂಡಿರಲಿಲ್ಲವಾ? ಎಂದು ವಿಜುಗೌಡ ಪ್ರಶ್ನಿಸಿದರು.

ಇಷ್ಟು ವರ್ಷ ಇಲ್ಲದೇ ಇರುವ ಸಮಸ್ಯೆಗಳು ಇದೀಗ ಏಕೆ ಉದ್ಭವಿಸುತ್ತಿವೆ? ಇದೀಗ ಸಮಸ್ಯೆ ಸೃಷ್ಠಿಸಿ ಟಾಸ್ಕ್ ಫೋರ್ಶ್ ಸಮಿತಿ ರಚಿಸುವ ಅವಶ್ಯಕತೆ ಇದೆಯಾ? ಕೂಡಲೇ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಹೋದರೆ ಹೊನವಾಡದಿಂದ ತಿಕೋಟಾ ಅಲ್ಲಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡು ಮನವಿ ಸಲ್ಲಿಸಲಾಗುವುದು. ಅದಕ್ಕೂ ಜಗ್ಗದೇ ಹೋದರೆ ಬೆಂಗಳೂರು ಮತ್ತು ದೆಹಲಿ ಮಟ್ಟದವರೆಗೆ ಹೋರಾಟ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಬಿಜೆಪಿ ಸನ್ನದ್ದವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net