ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಶಾಸಕರ ಭವನ (ಬೆಂಗಳೂರು)ದಲ್ಲಿ ಶಾಸಕರಿಗೆ ಅನುಕೂಲ ಕಲ್ಪಿಸುವ ನೆಪದಲ್ಲಿ ಸಾಕಷ್ಟು ದುಂದು ವೆಚ್ಚ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ಸರ್ಕಾರ ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸ್ತುಗಳ ಮಾರುಕಟ್ಟೆ ದರಕ್ಕೂ ಹಾಗೂ ಖರೀದಿ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಗರಿಷ್ಠ 8500 ರೂ. ಇರುವ ಸ್ಮಾರ್ಟ್ ಸಿಸ್ಟಮ್ ಲಾಕರ್ಗೆ 35 ಸಾವಿರ ರೂ., 30 ಸಾವಿರ ವೆಚ್ಚದ ಸ್ಮಾರ್ಟ್ ಎನರ್ಜಿ ಸಿಸ್ಟಮ್ೆ 90 ಸಾವಿರ ರೂ. ಖರ್ಚು ಹಾಕಲಾಗಿದೆ. ಹಾಸಿಗೆ, ದಿಂಬು, ಸ್ಪೋರ್ಟ್ಸ್ ಇಕಿಪ್ವೆುಂಟ್, ಇತ್ಯಾದಿಗಳ ಖರೀದಿಯಲ್ಲೂ ದುಂದುವೆಚ್ಚವಾಗಿವೆ ಎಂದು ಹೇಳಿದರು.
ಶಾಸಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಅಲ್ಲಿಯ ಕೆಲಸಗಳೆಲ್ಲ ಮಂಗಳೂರಿನವರಿಂದಲೇ ಮಾಡಿಸಿದ್ದು ಯಾಕೆ ಎಂಬುದು ಗೊತ್ತಾಗಬೇಕು. ಖರ್ಚು ವೆಚ್ಚಗಳಿಗೆ ಹಣಕಾಸು ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲವೆಂದು ಕೇಳಿದ್ದೇನೆ. ದುಂದು ವೆಚ್ಚದ ಬಗ್ಗೆ ನಾನು ವಿಧಾನಸಭಾಧ್ಯಕ್ಷರನ್ನು ನೇರ ಹೊಣೆಗಾರರನ್ನಾಗಿ ಮಾಡುತ್ತಿಲ್ಲ. ವಿಧಾನಸಭಾ ಸಚಿವಾಲಯ, ಹಣಕಾಸು, ಅನ್ಯ ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ತನಿಖೆಯಿಂದ ಎಲ್ಲವೂ ಬಹಿರಂಗಕ್ಕೆ ಬರಲಿದೆ ಎಂದರು.
ಆರ್ಟಿಐ ವ್ಯಾಪ್ತಿಗೆ ಬರಲಿ
ವಿಧಾನಸಭಾಧ್ಯಕ್ಷರ ಕಚೇರಿ ಆರ್ಟಿಐ (ಮಾಹಿತಿ ಹಕ್ಕು ಕಾಯ್ದೆ) ವ್ಯಾಪ್ತಿಗೆ ಬರಬೇಕು ಎಂದು ಹೇಳಿದ ಅವರು, ಪಿಎಂ ಕೇರ್ಸ್ ಫಂಡ್ ಆರ್ಟಿಐ ವ್ಯಾಪ್ತಿಗೆ ಸೇರಿಸಬೇಕೆಂಬ ವಿರೋಧ ಪಕ್ಷಗಳ ಆಗ್ರಹದ ಬಗ್ಗೆ ಸ್ಪಷ್ಟ ಉತ್ತರ ನೀಡಲಿಲ್ಲ.
ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಪರಾಧಿ ಮಾನಸಿಕತೆಯ ಜನರಿಗೆ ತಮಗೆ ಬೇಕಾದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಅನಿಸಿಬಿಟ್ಟಿದೆ. ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ಪರಿಹಾರ ಇಲ್ಲ. ಶಾಲಾ ಕಟ್ಟಡ ದುರಸ್ತಿಗೆ ಹಣವಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಸರ್ಕಾರ ದಿನಕ್ಕೊಂದು ವಿವಾದ ಹುಟ್ಟು ಹಾಕಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ವಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಪರಿಸರ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜತೆಗೆ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುವುದು ನಮ್ಮ ಉದ್ದೇಶವಾಗಿದೆ. ವಿಸõತ ಯೋಜನಾ ವರದಿ (ಡಿಪಿಆರ್) ತಯಾರಿಕೆಯ ವಿವಿಧ ಹಂತಗಳಲ್ಲಿ ಈ ಎಲ್ಲ ಅಂಶಗಳು ಚರ್ಚೆಯಾಗಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಮುಖರಾದ ರಂಗಾ ಬದ್ದಿ, ವಸಂತ ನಾಡಜೋಶಿ, ದತ್ತಮೂರ್ತಿ ಕುಲಕರ್ಣಿ, ಬಸವರಾಜ ಗರಗ ಇದ್ದರು.